ಜೂನ್‌ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಪರೀಕ್ಷೆ ಕುರಿತ ನಿರ್ಧಾರ ಪ್ರಕಟ: ಡಾ. ಅಶ್ವತ್ಥನಾರಾಯಣ

ಉನ್ನತ ಶಿಕ್ಷಣದ ಪರೀಕ್ಷೆ ಕುರಿತಂತೆ ಜೂನ್‌ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಆನ್‌ಲೈನ್‌/ಆಫ್‌ಲೈನ್‌ ತರಗತಿ ಮೂಲಕ ಅಭ್ಯಾಸ ಪೂರ್ಣಗೊಳಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ನಡೆಸಿದ ಡಾ ಅಶ್ವಥ ನಾರಾಯಣ
ವಿಡಿಯೊ ಕಾನ್ಫರೆನ್ಸ್ ನಡೆಸಿದ ಡಾ ಅಶ್ವಥ ನಾರಾಯಣ

ಬೆಂಗಳೂರು: ಉನ್ನತ ಶಿಕ್ಷಣದ ಪರೀಕ್ಷೆ ಕುರಿತಂತೆ ಜೂನ್‌ ಮೊದಲ ವಾರದಲ್ಲಿ ನಿರ್ಧಾರ ಪ್ರಕಟಿಸಲಾಗುವುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಆನ್‌ಲೈನ್‌/ಆಫ್‌ಲೈನ್‌ ತರಗತಿ ಮೂಲಕ ಅಭ್ಯಾಸ ಪೂರ್ಣಗೊಳಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಕೊರೊನಾ ಕುರಿತ ಕರ್ನಾಟಕ ಸರ್ಕಾರದ ಉಪಕ್ರಮಗಳ ಕುರಿತು 'ಸಮರ್ಥ ಭಾರತ' ಫೇಸ್‌ಬುಕ್‌ ಪೇಜ್‌ನ ಲೈವ್‌ ಕಾರ್ಯಕ್ರಮದಲ್ಲಿ ನಿನ್ನೆ ಮಾತನಾಡಿದ ಅವರು, ಲಾಕ್‌ಡೌನ್‌, ಸಾಮಾಜಿಕ ಜಾಗೃತಿ, ಶಿಕ್ಷಣ, ಜೀವನೋಪಾಯ ಮುಂತಾದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಉನ್ನತ ಶಿಕ್ಷಣ ಕೋರ್ಸ್‌ಗಳ ಕುರಿತು ಮಾತನಾಡಿದ ಅವರು, "ಈ ಪರೀಕ್ಷೆಗಳು ಯಾವಾಗ, ಹೇಗೆ ನಡೆಸಬೇಕು ಎಂಬ ವಿಚಾರವಾಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಐದು ಬಾರಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುವುದು ಬೇಡ. ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿ, ಪಠ್ಯಕ್ರಮದ ಅಭ್ಯಾಸ ಮಾಡಿ. ನೆಟ್‌ವರ್ಕ್‌ ಸಮಸ್ಯೆ ಇರುವವರು ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಿ ವೀಕ್ಷಿಸಿ. ಕಾಲೇಜಿಗೆ ಹೋಗುವ ಬದಲು ಇರುವ ಸ್ಥಳದಿಂದಲೇ ಅಭ್ಯಾಸ ಮಾಡಿ ಜ್ಞಾನರ್ಜನೆಗೆ ಮೊದಲ ಆದ್ಯತೆ ಕೊಟ್ಟಾಗ ಪರೀಕ್ಷೆ ಎದುರಿಸುವುದು ಕಷ್ಟವಾಗದು. ಜೂನ್‌ ಮೊದಲ ವಾರದಲ್ಲಿ ಪರೀಕ್ಷೆ ಪೂರ್ಣ ವಿವರಗಳನ್ನು ನೇರವಾಗಿ ಹಂಚಿಕೊಳ್ಳುತ್ತೇನೆ. ವಿದ್ಯಾರ್ಥಿಗಳ ಹಿತ ಕಾಯುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ವಹಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಆನ್‌ಲೈನ್‌ ಶಿಕ್ಷಣಕ್ಕೆ ಆದ್ಯತೆ
ಪರೀಕ್ಷೆ ಸಮಯದಲ್ಲೇ ಕೊರೊನಾ ಸಂಕಷ್ಟ ಎದುರಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲ ಪೂರಕ ಕ್ರಮ ಜರುಗಿಸಲಾಗಿದೆ. ಎಲ್ಲ ಪಾಠ ಪ್ರವಚನಗಳನ್ನು ವೀಡಿಯೋ ಮಾಡಿ ಯೂಟ್ಯೂಬ್ ಚಾನಲ್‌ಗಳಾದ 'ವಿಜಯೀ ಭವ', 'ಜ್ಞಾನ ನಿಧಿ' ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. 'ಸ್ವಯಂ' ಎಂಬ ಆನ್‌ಲೈನ್ ವೇದಿಕೆ ಮೂಲಕ ಯುಜಿಸಿ ಪಾಠ ಮಾಡಿದೆ, ಕರ್ನಾಟಕ ಮುಕ್ತ ವಿವಿಯಿಂದಲೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಕಾಲೇಜಿನಿಂದಲೇ ಪ್ರಾಧ್ಯಾಪಕರು ಆನ್‌ಲೈನ್‌ ತರಗತಿ ಜತೆಗೆ, ಪ್ರಾಯೋಗಿಕ ತರಗತಿ, ಪ್ರಾಜೆಕ್ಟ್‌ ವರ್ಕ್‌ ಮಾಡಲು ನೆರವಾಗುತ್ತಿದ್ದಾರೆ. ನೀಟ್‌ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿಯೇ 'ಗೆಟ್‌ಸೆಟ್‌ ಗೊ' ಆನ್‌ಲೈನ್‌ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. 2 ಹಾಗೂ 3ನೇ ವರ್ಷದ ಪದವಿ ತರಗತಿಗಳು ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್‌ನಿಂದ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಲಿದೆ ಎಂದು ವಿವರಿಸಿದರು.

"ಲಾಕ್‌ಡೌನ್‌ ಅವಧಿಯಲ್ಲಿ ಆರೋಗ್ಯ, ಆಹಾರ, ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಎಲ್ಲ ವಿಚಾರದಲ್ಲೂ ತಂತ್ರಜ್ಞಾನದ ಬಳಕೆ ಆಗಿದೆ. ಆನ್‌ಲೈನ್ ಮೂಲಕ ಎಲ್ಲವೂ ಮನೆ ಬಾಗಿಲಿಗೆ ತಲುಪಿಸಿದ್ದು ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ಇಲಾಖೆ ಎಲ್ಲ ವಿಷಯಗಳ ಬಗ್ಗೆ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ನಿಭಾಯಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ 'ವರ್ಕ್‌ಫ್ರಮ್‌ ಹೋಮ್‌' ಸಂಸ್ಕೃತಿ ಎಲ್ಲರಿಗೂ ಆಪ್ತವಾಗಿದೆ. ಯಾವುದೇ ಕೆಲಸ ಕಾರ್ಯಗಳು ಸ್ಥಗತಗೊಳ್ಳದೇ ನಿರಾತಂಕವಾಗಿ ಮುಂದುವರಿಸಲು ತಂತ್ರಜ್ಞಾನ ನೆರವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com