ಬಸ್ ಸಂಚಾರವೇನೋ ಆರಂಭ, ಪ್ರಯಾಣಿಕರಿಗೆ ಓಡಾಡಲು ಇನ್ನೂ ಇದೆ ಕೊರೋನಾ ಭಯ!

ಲಾಕ್ ಡೌನ್ ಆದ ಸುಮಾರು ಎರಡು ತಿಂಗಳ ನಂತರ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಆರಂಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಆಟೋರಿಕ್ಷಾ, ಕ್ಯಾಬ್, ಬಸ್ ಗಳ ಓಡಾಟ ಆರಂಭವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್ ಡೌನ್ ಆದ ಸುಮಾರು ಎರಡು ತಿಂಗಳ ನಂತರ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಆರಂಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಆಟೋರಿಕ್ಷಾ, ಕ್ಯಾಬ್, ಬಸ್ ಗಳ ಓಡಾಟ ಆರಂಭವಾಗಿದೆ.

ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ಸುಗಳ ಓಡಾಟ ಭಾಗಶಃ ಆರಂಭವಾಗಿದ್ದು ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕೆಂದು ನಿಯಮ ಹೊರಡಿಸಲಾಗಿದೆ. ಆದರೆ ಬಸ್ಸುಗಳ ಸಂಚಾರದಲ್ಲಿ ಜನರಿಂದ ನೀರವ ಪ್ರತಿಕ್ರಿಯೆ ನಿನ್ನೆ ಮೊದಲ ದಿನ ಕಂಡಿದೆ. ನಿರೀಕ್ಷಿತ ಪ್ರಮಾಣದಲ್ಲಿ ಜನರ ಬಸ್ ಸಂಚಾರ ಇರಲಿಲ್ಲ.

ಈ ಬಗ್ಗೆ ಮಾತನಾಡಿದ ಬಿಎಂಟಿಸಿ ವಕ್ತಾರರೊಬ್ಬರು, ನಿನ್ನೆ 1,500 ಬಸ್ಸುಗಳ ಸಂಚಾರ ನಡೆಸಲಾಗಿತ್ತು. ಪ್ರಯಾಣಿಕರನ್ನು ಸಂಚರಿಸುವಾಗ ನಿಂತುಕೊಳ್ಳಲು ಬಿಡಲಿಲ್ಲ. ಟಿಕೆಟ್ ಗೆ ಬದಲಾಗಿ ಪ್ರಯಾಣಿಕರು 70 ರೂಪಾಯಿಯ ದಿನದ ಪಾಸು ಅಥವಾ 300 ರೂಪಾಯಿಯ ವಾರದ ಪಾಸ್ ತೆಗೆದುಕೊಳ್ಳಬೇಕು. ಬಸ್ಸುಗಳನ್ನು ಮತ್ತು ಕೆಂಪೇಗೌಡ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗಿದೆ. ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳ ಪೈಂಟಿಂಗ್ ಮಾಡಲಾಗಿದೆ. ಅದರೊಳಗೆ ಪ್ರಯಾಣಿಕರು ನಿಂತು ಬಸ್ಸಿಗೆ ಹತ್ತಬೇಕು ಎಂದರು.

ಇನ್ನು ಕೆಎಸ್ ಆರ್ ಟಿಸಿ ಬಸ್ಸುಗಳು ಯಾವುದೇ ಊರಿಗೆ ಹೋಗುವುದಿದ್ದರೂ ಸಂಜೆ 7 ಗಂಟೆಯೊಳಗೆ ಅಲ್ಲಿಗೆ ತಲುಪಬೇಕು. ಕೊನೆಯ ಬಸ್ಸು ಹೊರಡುವುದು ಸಂಜೆ 7 ಗಂಟೆಗೆ. ಬೆಂಗಳೂರು-ಬೀದರ್ ಮತ್ತು ಕಲಬುರಗಿಗಳಂತಹ ಮಾರ್ಗಗಳಲ್ಲಿ ಬಸ್ಸುಗಳು ಮರುದಿನ ತಲುಪುತ್ತವೆ. ಮೈಸೂರಿನಲ್ಲಿ ಕೇವಲ 80 ನಾನ್ ಸ್ಟಾಪ್ ಬಸ್ ಸೇವೆಗಳನ್ನು ಆರಂಭಿಸಿದ್ದು ಬೆಂಗಳೂರು, ಕೊಡಗು, ಹಾಸನ, ಚಾಮರಾಜನಗರ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರುಗಳಿಗೆ ಹೋಗುತ್ತದೆ. ಸಿಟಿ ಬಸ್ ಸೇವೆಗಳಿಗೆ ಹೆಚ್ಚಿನ ಬೇಡಿಕೆಯಿಲ್ಲ. ಸಾಮಾನ್ಯ ದಿನಗಳಲ್ಲಿ 423 ಶೆಡ್ಯೂಲ್ ಗಳಲ್ಲಿ ಬಸ್ ಸಂಚರಿಸಿದರೆ ಈಗ 69 ಶೆಡ್ಯೂಲ್ ಗಳು ಮಾತ್ರ. ಹಾಸನದಲ್ಲಿ ಕೂಡ ಬಸ್ ಸೇವೆಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಿವಮೊಗ್ಗದಿಂದ ರಾಜ್ಯದ ವಿವಿಧ ಭಾಗಗಳಿಗೆ 120 ಬಸ್ಸುಗಳು ಸಂಚರಿಸಿದವು. ಚಿತ್ರದುರ್ಗದಿಂದ ಹೊರಟ 67 ಬಸ್ಸುಗಳಲ್ಲಿ ಬಹುತೇಕ ಬೆಂಗಳೂರಿಗೆ ಮತ್ತು ದಾವಣಗೆರೆ, ಹಾಸನ, ಹೊಸಪೇಟೆ ಮತ್ತು ಶಿವಮೊಗ್ಗಗಳಿಗೆ ಇದ್ದವು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ.

ಹುಬ್ಬಳ್ಳಿಯಲ್ಲಿ ವಾಯವ್ಯ ಸಾರಿಗೆ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್ ಕುಮಾರ್ ವಿ ಎಚ್, 1200 ಶೆಡ್ಯೂಲ್ ಗಳಲ್ಲಿ ಸಂಚಾರ ಮಾಡಲು ನಿನ್ನೆ ನಿರ್ಧರಿಸಲಾಗಿತ್ತಾದರೂ ಕೊನೆಗೆ 1,100 ಶೆಡ್ಯೂಲ್ ಮಾತ್ರ ನಿರ್ವಹಿಸಲಾಯಿತು. ಇಂದಿನಿಂದ ಜನರ ಬೇಡಿಕೆ ನೋಡಿಕೊಂಡು ಹೆಚ್ಚಿನ ಶೆಡ್ಯೂಲ್ ಮಾಡಲಾಗುವುದು ಎಂದರು. ಬೆಳಗಾವಿಯಲ್ಲಿ ಜನರು ಕೊರೋನಾ ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಬಿಟ್ಟು ಹೊರ ಬರಲಿಲ್ಲ. ಬೆಳಗಾವಿಯಿಂದ ನಿನ್ನೆ ಎರಡು ಬಸ್ಸುಗಳು ಬೆಂಗಳೂರು, ವಿಜಯಪುರಕ್ಕೆ ಮೂರು ಬಸ್ಸುಗಳು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಚರಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com