ಪಿ.ಯು ಮಟ್ಟದಿಂದಲೇ ಆನ್‌ಲೈನ್‌ ತರಗತಿ ಪ್ರಾರಂಭ ಬಗ್ಗೆ ಪರಿಶೀಲಿಸಿ: ಬಿ.ಎಸ್. ಯಡಿಯೂರಪ್ಪ ಸೂಚನೆ

ಕೋವಿಡ್ 19 ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿ ಎಸ್ ಯಡಿಯೂರಪ್ಪ ಸಭೆ
ಬಿ ಎಸ್ ಯಡಿಯೂರಪ್ಪ ಸಭೆ
Updated on

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದರು.

ಆನ್ ಲೈನ್ ತರಗತಿಗಳು ಸಾಮಾನ್ಯ ತರಗತಿಗಳಿಗೆ ಹೋಲಿಸಿದರೆ, ಕಡಿಮೆ ವೆಚ್ಚದ್ದಾಗಿದ್ದು, ಈ ವ್ಯವಸ್ಥೆಯನ್ನು ಪಿ.ಯು ಮಟ್ಟದಿಂದಲೇ ಪ್ರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಲಾಕಡೌನ್ ಪೂರ್ವದಲ್ಲಿ ಶೇ 79 ರಷ್ಟು ಪಠ್ಯಕ್ರಮ ಪೂರ್ಣಗೊಂಡಿದ್ದು, ಮೇ 31ರೊಳಗೆ ಶೇಕಡಾ 21ರಷ್ಟು ಪಠ್ಯಕ್ರಮಗಳನ್ನು ಆನ್‍ಲೈನ್ ಬೋಧನೆ ಮೂಲಕ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ವೆಬ್‍ಎಕ್ಸ್, ಸ್ಕೈಪ್ ಹಾಗೂ ಇತರೆ ಆನ್‍ಲೈನ್ ಪ್ಲಾಟ್ ಫಾರಂ ಮೂಲಕ 30 ಸಾವಿರ ಆನ್‍ಲೈನ್ ತರಗತಿಗಳನ್ನು ನಡೆಸಲಾಗಿದೆ. ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಶೇಕಡಾ 85 ರಷ್ಟು ವಿದ್ಯಾಥಿಗಳಿಗೆ ಇ-ನೋಟ್ಸ್, ಪಿಪಿಟಿ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ವಿತರಣೆ ಮಾಡಲಾಗಿದೆ. ಜ್ಞಾನನಿಧಿ ಯು-ಟ್ಯೂಬ್ ಚಾನೆಲ್ ಮೂಲಕ 65 ವಿಷಯಗಳ 7,074 ಬೋಧನಾ ವಿಡಿಯೋ ಅಪ್‍ಲೋಡ್ ಮಾಡಲಾಗಿದ್ದು, 5 ಲಕ್ಷ ವೀಕ್ಷಣೆಯಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಗೆಟ್ ಸಿಇಟಿ ಗೋ ಮೂಲಕ 2 ಲಕಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪಲಾಗಿದ್ದು, 13,600 ವಿದ್ಯಾರ್ಥಿಗಳು ಯು ಟ್ಯೂಬ್ ಚಂದಾದಾರರಾಗಿದ್ದಾರೆ. 90 ಸಾವಿರ ಲಾಗಿನ್ ಆಗಿದೆ. ಈ ಪೋರ್ಟಲ್‍ಗೆ ನಾಲ್ಕು ಸ್ಟಾರ್ ಗಳು ದೊರೆತಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 10 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಲ್ಯಾಪ್ ಟಾಪ್ ವಿತರಿಸಲಾಗಿರುವ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆ ಅನುಷ್ಠಾನಕ್ಕೆ ಬರಲಿದೆ. ಕೋವಿಡ್ – 19 ಪರಿಸ್ಥಿತಿಯಲ್ಲಿ ಡಿಜಿಟಲ್ ಕಲಿಕೆಗೆ ಹೆಚ್ಚಿನ ಮಹತ್ವ ಒದಗಿಸಲಾಗಿದ್ದು, ಮೈತ್ರಿ ಸಹಾಯವಾಣಿ ಪೋರ್ಟಲ್ ನಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ.

ಹನ್ನೊಂದು ಕೋಟಿ ರೂ. ಗಳ ವೆಚ್ಚದಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಸಮಗ್ರ ನಿರ್ವಹಣಾ ವ್ಯವಸ್ಥೆಯನ್ನು ಇ-ಆಡಳಿತ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ: ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

ಯುಜಿಸಿ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಜೂನ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಬಾರಿ ಬೇಸಿಗೆ ರಜೆಯನ್ನು ಮೊಟಕುಗೊಳಿಸಲಾಗುವುದು.

ರಾಜ್ಯದ 13 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಕಾಲೇಜುಗಳು ಇಲ್ಲದೇ ಇರುವುದನ್ನು ಗುರುತಿಸಿದ್ದು, ಹೆಚ್ಚುವರಿ ಕಾಲೇಜುಗಳು ಇರುವ ಕ್ಷೇತ್ರಗಳಿಂದ 6 ಪ್ರಥಮ ದರ್ಜೆ ಕಾಲೇಜುಗಳನ್ನ ಈ ಭಾಗಗಳಿಗೆ ಸ್ಥಳಾಂತರ ಮಾಡಲಾಗುವುದು.

ಬೆಂಗಳೂರಿನ ಬಾಬಾ ಸಾಹೇಬ್ ಸ್ಕೂಲ್ ಆಫ್ ಎಕಾಮಿಕ್ಸ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆ ಲಾಕ್ ಡೌನ್ ನಂತರದ ದಿನಗಳಲ್ಲಿ ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಯುವ ಸಬಲೀಕರಣ ಕೇಂದ್ರಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪೋರ್ಟಲ್‍ಮೂಲಕ ಒಂದೇ ಸೂರಿನಡಿ ಸಮಗ್ರ ಮಾಹಿತಿಯನ್ನು ಒದಗಿಸಲಾಗುವುದು. ಈ ಕೇಂದ್ರಕ್ಕೆ ಪ್ರೌಢಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳ ನೊಂದಣಿಯನ್ನು ಪ್ರಾರಂಭಿಸಲಾಗುವುದು. ಶಾಲೆ/ ಕಾಲೇಜಿನಿಂದ ಹೊರಗುಳಿಯುವ ವಿದ್ಯಾರ್ಥಿಗಳನ್ನು ಈ ಮೂಲಕ ಪತ್ತೆ ಹಚ್ಚಸಲು ಸಾಧ್ಯವಾಗಲಿದೆ.

ಕೈಗಾರಿಕೆಗಳನ್ನು ಇದರೊಂದಿಗೆ ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಹಾಗೂ ಉದ್ಯೋಗ ದೊರಕಿಸುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com