ಕುರುಡು ಪ್ರೇಮಕ್ಕೆ ಬಲಿಯಾಯ್ತು ಜೀವ! ಪ್ರೇಯಸಿಯ ಮೇಲೆ ಹಲ್ಲೆ ನಡೆಸಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ

ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಪಟುವೊಬ್ಬ ಯುವತಿಯ ಪ್ರೇಮಪಾಶಕ್ಕೆ ಸಿಕ್ಕು ಪ್ರೀತಿ ದೊರಕದೆ ಹೋದಾಗ ಆಕೆಯನ್ನು ಕೊಲ್ಲಲು ಯತ್ನಿಸಿ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. 
ಗಿರೀಶ್
ಗಿರೀಶ್
Updated on

ಬೆಂಗಳೂರು: ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಪಟುವೊಬ್ಬ ಯುವತಿಯ ಪ್ರೇಮಪಾಶಕ್ಕೆ ಸಿಕ್ಕು ಪ್ರೀತಿ ದೊರಕದೆ ಹೋದಾಗ ಆಕೆಯನ್ನು ಕೊಲ್ಲಲು ಯತ್ನಿಸಿ ಕಡೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಪ್ರೀತಿ ನಿರಾಕರಿಸಿದ್ದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲ್ಲಲು ಯತ್ನಿಸಿದ್ದ ಪಾಗಲ್ ಪ್ರೇಮಿ ಗಿರೀಶ್ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಸಮೀಪ ಘಟನೆ ನಡೆದಿದ್ದು  ಸಧ್ಯ ಹಲ್ಲೆಗೊಳಗಾಗಿದ್ದ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಘಟನೆ ವಿವರ:
ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಪಟುವಾಗಿದ್ದ ಗಿರೀಶ್ ರಾಜ್ಯದ ಕೆಲ ಪ್ರತಿಷ್ಠಿತ ಕ್ಲಬ್ ಗಳಿಗೆ ಆಡುತ್ತಿದ್ದದ್ದಲ್ಲದೆ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದ. ಇಂತಹಾ ಪ್ರತಿಭಾವಂತ ಕ್ರೀಡಾಪಟು ಯುವತಿಯೊಬ್ಬಳ ಪ್ರೇಮಕ್ಕೆ ಬಿದ್ದಿದ್ದಾನೆ. ಈ ಇಬ್ಬರದ್ದೂ ಮೂರು ವರ್ಷಗಳ ಪ್ರೀತಿಯಾಗಿತ್ತು. ಕಳೆದ ಆರು ತಿಂಗಳ ಹಿಂದೆ ಮನೆಯವರ ವಿರೋಧಕ್ಕೆ ಹೆದರಿ ಇಬ್ಬರೂ ಮನೆಯಿಂದ ಓಡಿ ಹೋಗಿದ್ದರು. ಆಗ ಯುವತಿಯ ಸಂಬಂಧಿಯೊಬ್ಬರು ಕರೆ ಮಾಡಿ ನಿಮ್ಮಿಬ್ಬರಿಗೆ ವಿವಾಹ ಮಾಡಿಸುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಜೋಡಿ ಹಿಂದಿರುಗಿದ್ದರು.

ಆದರೆ ಯುವತಿಯ ಸಂಬಂಧಿಕರು ಆಕೆಯನ್ನು ತಕ್ಷಣ ಬೆಂಗಳೂರಿನ ಬದಲು ಮಂಡ್ಯದ ಅವರ ಸಂಬಂಧಿಗಳ ಮನೆಯಲ್ಲಿರಿಸಿದ್ದಾರೆ. ಅಲ್ಲದೆ ಆಕೆಯ ಬ್ರೈನ್ ವಾಶ್ ಮಾಡಿ ಗಿರೀಶ್ ನನ್ನು ತೊರೆಯುವಂತೆ ಮಾಡಿದ್ದಾರೆ.

ಯುವತಿ ಸಿಕ್ಕದ ಹಿನ್ನೆಲೆ ಗಿರೀಶ್ ಖಿನ್ನತೆಗೆ ಒಳಗಾಗಿದ್ದ. ಆದರೆ ಇತ್ತ ಯುವತಿಯ ಮನೆಯವರು ಆಕೆಗೆ ಬೇರೆಯವನೊಡನೆ ಮದುವೆ ಮಾಡಲು ತಯಾರಿ ನಡೆಸಿದ್ದಾರೆ. ಈ ವಿಚಾರ ಗಿರೀಶ್ ಸ್ನೇಹಿತನಿಂದ ತಿಳಿದ ಗಿರೀಶ್ ಯುವತಿಯನ್ನು ಬೇಟಿಯಾಗಲು ಯತ್ನಿಸಿದರೂ ಆಕೆ ಅವನತ್ತ ತಿರುಗಿಯೂ ನೋಡಿಲ್ಲ. ಆಗ ಮತ್ತಷ್ಟು ಕುಗ್ಗಿದ ಗಿರೀಶ್ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಅವನ ಮನೆಯವರೇ ಆತನನ್ನು ಉಳಿಸಿದ್ದರು.

ಆದರೆ ಈ ಘಟನೆ ನಡೆದ ನಂತರವೂ ಗಿರೀಶ್ ಮಾನಸಿಕ ಸ್ಥಿತಿ ಸರಿಹೋಗಲಿಲ್ಲ. ಬದಲಾಗಿ ತನಗೆ ಸಿಕ್ಕದ ಯುವತಿ ಇನ್ನಾರಿಗೆ ಸಿಕ್ಕಬಾರದೆಂದು ನಿಶ್ಚಯಿಸಿದ್ದ. ಇದಕ್ಕಾಗಿ ಯುವತಿ ತಾನು ಮದುವೆಯಾಗುವ ಯುವಕನನ್ನು ಕಾಣುವುದಕ್ಕೆ ಮುನ್ನ ಆಕೆಯನ್ನು ಹತ್ಯೆ ಮಾಡಲು ನಿಶ್ಚಯಿಸಿದ. ಅದರಂತೆ ಬುಧವಾರ ಪ್ರೇಯಸಿ ಮೇಲೆ ಮಚ್ಚಿನಿಂದ ಮಾರಕ ದಾಳಿ ನಡೆಸಿ ಪರಾರಿಯಾಗಿದ್ದ. ವಿಶಾಲ್​ ಮಾರ್ಟ್​ ಬಳಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್ ತಾವರೆಕೆರೆ ರಸ್ತೆಯ ಬಳಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಹೀಗೆ ಪ್ರೀತಿಯ ಗುಂಗು ರಾಜ್ಯಮಟ್ಟದ ಕಬಡ್ಡಿ ಆಟಗಾರನನ್ನು ಬಲಿಪಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com