
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಉಲ್ಲೇಖಿಸಿರುವುದನ್ನು ಬದಿಗೊತ್ತಿ ಕೇಸನ್ನು ವಿಶೇಷ ಕೋರ್ಟ್ ಗೆ ರಾಜ್ಯ ಹೈಕೋರ್ಟ್ ಹಿಂತಿರುಗಿಸಿದೆ.
ಅಲ್ಲದೆ, ಸಚಿವ ಸಿ ಟಿ ರವಿ ವಿರುದ್ಧ ದೂರು ಸಲ್ಲಿಸಿರುವ ಎ ಸಿ ಕುಮಾರ್ ಎಂಬುವವರು ತಮ್ಮ ಆರೋಪಕ್ಕೆ ಸಂಬಂಧಪಟ್ಟಂತೆ ಅಫಿಡವಿಟ್ಟು ಸಲ್ಲಿಕೆಗೆ ಮತ್ತೊಂದು ಅವಕಾಶವನ್ನು ಹೈಕೋರ್ಟ್ ನೀಡಿದೆ.
ಅಲ್ಲದೆ, ಚಿಕ್ಕಮಗಳೂರು ನಿವಾಸಿಯಾಗಿರುವ ಎ ಸಿ ಕುಮಾರ್ ಅವರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ನೀಡಿರುವುದರಿಂದ ಎಸಿಬಿ ಮುಂದೆ ಸಹ ದೂರು ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ. ಎ ಸಿ ಕುಮಾರ್ ಅವರು ಸಿ ಟಿ ರವಿ ವಿರುದ್ಧ 2012ರಲ್ಲಿ ಖಾಸಗಿ ದೂರೊಂದನ್ನು ನೀಡಿ 2004ರಿಂದ 2010ರ ಮಧ್ಯೆ ಬಲ್ಲ ಮೂಲಗಳ ಆದಾಯದ ಹೊರತಾಗಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆಪಾದಿಸಿದ್ದರು. ಈ ಸಮಯದಲ್ಲಿ ಅವರ ಬಲ್ಲ ಆದಾಯದ ಮೂಲ 49 ಲಕ್ಷ ರೂಪಾಯಿ ಆದರೆ ಅವರ ಆಸ್ತಿ ಗಳಿಕೆ 3.18 ಕೋಟಿಯಷ್ಟಾಗಿದೆ, ಇಷ್ಟೊಂದು ಗಳಿಕೆ ಹೊಂದಲು ಹೇಗೆ ಸಾಧ್ಯ ಎಂದು ಎ ಸಿ ಕುಮಾರ್ ಪ್ರಶ್ನಿಸಿದ್ದರು.
2015ರಲ್ಲಿ ಸುಪ್ರೀಂ ಕೋರ್ಟ್, ದೂರು ನೀಡಿದವರು ಕಡ್ಡಾಯವಾಗಿ ದೂರಿಗೆ ಸಾಕ್ಷಿಯಾಗಿ ಅಫಿಡವಿಟ್ಟು ಸಲ್ಲಿಸಬೇಕೆಂದು ಆದೇಶ ಹೊರಡಿಸಿತ್ತು. ದೂರು ನೀಡಿದವರು ಅದಕ್ಕೆ ಪೂರಕವಾಗಿ ಅಫಿಡವಿಟ್ಟು ಸಲ್ಲಿಸಿಲ್ಲ, ಹಾಗಾಗಿ ಇಡೀ ಪ್ರಕರಣವನ್ನು ಕೈಬಿಡಬೇಕೆಂದು ಸಿ ಟಿ ರವಿ ಹೈಕೋರ್ಟ್ ಮೊರೆ ಹೋಗಿದ್ದರು.
Advertisement