ಆನ್‌ಲೈನ್‌ ಕಲಿಕೆ; ಮೋಜಿನ ಚಟುವಟಿಕೆಗಳಿಗೆ ಮಕ್ಕಳು ಖುಷ್‌!

ಇದು ಆನ್‌ಲೈನ್‌ ಶಿಕ್ಷಣದ ಕಾಲ. ಆದರೆ, ಇಲ್ಲಿ ಆನ್‌ಲೈನ್‌ ಶಿಕ್ಷಣ ಕೇವಲ ಶಾಲಾ ಕಾಲೇಜುಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಅಂಗನವಾಡಿಯ ಪುಟಾಣಿ ಮಕ್ಕಳಿಗೂ ಆನ್‌ಲೈನ್‌ ಶಿಕ್ಷಣ ಒದಗಿಸಲು ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇದು ಆನ್‌ಲೈನ್‌ ಶಿಕ್ಷಣದ ಕಾಲ. ಆದರೆ, ಇಲ್ಲಿ ಆನ್‌ಲೈನ್‌ ಶಿಕ್ಷಣ ಕೇವಲ ಶಾಲಾ ಕಾಲೇಜುಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಅಂಗನವಾಡಿಯ ಪುಟಾಣಿ ಮಕ್ಕಳಿಗೂ ಆನ್‌ಲೈನ್‌ ಶಿಕ್ಷಣ ಒದಗಿಸಲು ಸರ್ಕಾರ ಮುಂದಾಗಿದೆ.
 
ಕೋವಿಡ್‌ ಮಹಾಮಾರಿಯ ಕಾರಣದಿಂದ ಮಕ್ಕಳು ಶಾಲೆಗಳಿಂದ ವಂಚಿತರಾಗಿದ್ದಾರೆ. ಆದರೆ, ಅವರು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಆನ್‌ಲೈನ್‌ ತರಗತಿ, ವಿದ್ಯಾಗಮದಂತಹ ಯೋಜನೆಗಳು ಜಾರಿಯಲ್ಲಿವೆ.
 
ಆದರೆ, ನಿಜವಾಗಿಯೂ ಈ ಕೋವಿಡ್‌ನಿಂದ ಶಾಲಾ ವಾತಾವರಣದಿಂದ ವಂಚಿತರಾಗಿರುವುದು ಪೂರ್ವ ಪ್ರಾಥಮಿಕ ಮತ್ತು ಅಂಗನವಾಡಿ ಮಕ್ಕಳು. ಆಗ ತಾನೇ ಹೊಸ ಜಗತ್ತು, ಹೊಸ ಚಟುವಟಿಕೆಗಳಿಗೆ ಹೊಂದಿಕೊಳ್ಳುವ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಉಳಿಯುವಂತಾಗಿದೆ.
 
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ(ಐಸಿಡಿಎಸ್‌) ಅಂಗನವಾಡಿ ಮೂಲಕ ಮಕ್ಕಳ ಪೋಷಕರಿಗೆ ಪ್ರತಿ ನಿತ್ಯ ಹೇಳಿ ಕೊಡಬಹುದಾದ ಚಟುವಟಿಕೆಗಳ ವಿಡಿಯೋ ಕಳುಹಿಸಲಾಗುತ್ತಿದೆ. ಈ ವಿಡಿಯೋಗಳು ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗಳಿಗೆ ನೆರವಾಗುವ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. 
 
ಕಳೆದ ಒಂದೂವರೆ ತಿಂಗಳಿಂದ 'ಮಕ್ಕಳ ಜಾಗೃತಿ ಸಂಸ್ಥೆ' ಮೂಲಕ ಜಾರಿಯಾಗುತ್ತಿರುವ ಈ ಆನ್‌ಲೈನ್‌ ಕಲಿಕೆ ಮೋಜು-ಮಸ್ತಿ, ಹಾಡು-ಸಂಗೀತಗಳನ್ನು ಕೂಡ ಒಳಗೊಂಡಿದೆ. ಇಲ್ಲಿಯವರೆಗೆ ಇದು ರಾಜ್ಯದ ಎಲ್ಲಾ ಅಂಗನವಾಡಿಗಳ ಮೂಲಕ ಸಾವಿರಕ್ಕೂ ಹೆಚ್ಚು ಪೋಷಕರನ್ನು ತಲುಪುತ್ತಿದೆ.
 
ಅಂಗನವಾಡಿ ಕಾರ್ಯಕರ್ತೆಯೊಬ್ಬರ ಪ್ರಕಾರ, ಈ ಯೋಜನೆಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಪೋಷಕರು ಹಲವು ಬಾರಿ ಅಂಗನವಾಡಿ ತೆರೆಯುವಂತೆ ಆಗ್ರಹಿಸಿದ್ದು, ಈ ಚಟುವಟಿಕೆಗಳಿಂದ ಸಂತಸಗೊಂಡಿದ್ದಾರೆ ಎಂದಿದ್ದಾರೆ.
 
'ಹಾಡು-ಮಾತಾಡು' ಆಕಾಶವಾಣಿ ಕಾರ್ಯಕ್ರಮ
 ಮನೆಯಲ್ಲಿಯೇ ಕಾಲ ಕಳೆಯುವ ಅನಿವಾರ್ಯತೆಗೆ ಸಿಲುಕಿರುವ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳತ್ತ ಅಕರ್ಷಿಸಲು ಐಸಿಡಿಎಸ್‌, ಆಕಾಶವಾಣಿ ಸಹಯೋಗದಿಂದ 'ಹಾಡು-ಮಾತಾಡು' ಕಾರ್ಯಕ್ರಮ ಆರಂಭಿಸಿದೆ. 
 
ಪ್ರತಿನಿತ್ಯ ಮುಂಜಾನೆ 9.15 ಸೇರಿದಂತೆ ಮಧ್ಯಾಹ್ನ ಹಾಗೂ ಸಂಜೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಬರುವ ಹಾಡುಗಳಿಗೆ ಕಲಾವಿದ ಪ್ರವೀಣ್‌ ಡಿ ರಾವ್‌ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡುಗಳನ್ನು ಒಂದು ಸಾಲು ಹೇಳಿದ ನಂತರ ಅದನ್ನು ಮಕ್ಕಳು ಪುನರುಚ್ಚರಿಸಲು ಅವಕಾಶವಾಗುವಂತೆ ಸಂಯೋಜಿಸಲಾಗಿದೆ. ಇದನ್ನು ಆಲಿಸಿದ ಮಕ್ಕಳು, ಅದನ್ನು ಪುನರುಚ್ಚರಿಸಿದ ವಿಡಿಯೋ ಮುದ್ರಿಸಿ ಆಕಾಶವಾಣಿಗೆ ವಾಟ್ಸ್‌ ಅ್ಯಪ್‌ ಮೂಲಕ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಮಕ್ಕಳಿಗೆ ಒಂದು ಪುಟಾಣಿ ಪ್ರಮಾಣ ಪತ್ರ ಕೂಡ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. 
 
ಹಾಡು-ಮಾತಾಡು ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2500ಕ್ಕೂ ವಿಡಿಯೋಗಳು ಬಂದಿದ್ದವು. ಆನ್‌ಲೈನ್‌ ವಿಡಿಯೋ ಕಳುಹಿಸುವ ಕಾರ್ಯಕ್ರಮವನ್ನು ಮೊದಲು ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತಾದರೂ, ಬಹುಬೇಡಿಕೆಯ ಮೇರೆಗೆ ರಾಜ್ಯಾದ್ಯಂತ ಆರಂಭಿಸಲಾಯಿತು. ಅದಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ಐಸಿಡಿಸಿ ಮಾಜಿ ನಿರ್ದೇಶಕ ಕೆ.ಎ.ದಯಾನಂದ್‌ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com