ತುಮಕೂರು: ದರೋಡೆ ಆರೋಪಿಯಿಂದ ಪೋಲೀಸರ ಮೇಲೆ ಹಲ್ಲೆ ಯತ್ನ, ಕಾಲಿಗೆ ಗುಂಡಿಕ್ಕಿ ಬಂಧಿಸಿದ ಖಾಕಿಪಡೆ
ತುಮಕೂರು: ಪ್ರಕರಣವೊಂದರ ಸ್ಥಳ ಮಹಜರು ಮಾಡುತ್ತಿದ್ದ ವೇಳೆ ಆರೋಪಿ ಪೋಲೀಸರ ಮೇಲೇ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಸಮಯದಲ್ಲಿ ಪೋಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ತುಮಕೂರು ಸಿದ್ದಗಂಗಾ ಮಠದ ಸನಿಹದಲ್ಲಿ ಆರೋಪಿ ರೋಹಿತ್ ಪೋಲೀಸರ ಮೇಲೆ ಹಲ್ಲೆ ಮಾಡಿದ್ದ, ಈ ವೇಳೆ ಸ್ಥಳದಲ್ಲಿದ್ದ ನಾಲ್ವರು ಪೋಲೀಸರ;ಲ್ಲಿ ಒಬ್ಬರಾದ ಹನುಮರಂಗಯ್ಯ ಅವರಿಗೆ ತೀವ್ರ ಗಾಯವಾಗಿದೆ, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ತುಮಕೂರಿನ ಶಿರಾ ಗೇಟ್ ಸಮೀಪ ವಾಲ್ಮೀಕಿ ನಗರದಲ್ಲಿ ನಡೆದಿದ್ದ ಮನೆ ದರೋಡೆ ಹಾಗೂ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರೋಹಿತ್ ಎಂಬಾತನ ಬಂಧನವಾಗಿತ್ತು. ಆರೋಪಿಯು ತಾನು ಕಳ್ಳತನ ಮಾಡಿದ್ದ ಮೊಬೈಲ್ ಗಳನ್ನು ಸಿದ್ದಗಂಗಾ ಮಠದ ಸಮೀಪ ರಸ್ತೆಯಲ್ಲಿ ಎಸೆದಿದ್ದಾಗಿ ಹೇಳಿದ್ದ. ಹಾಗಾಗಿ ಸ್ಥಳ ಮಹಜರಿಗಾಗಿ ಆರೋಪಿಯೊಂದಿಗೆ ಪೋಲೀಸರು ಆ ಸ್ಥಳಕ್ಕೆ ತೆರಳಿದ್ದರು. ಆದರೆ ಅಲ್ಲಿ ಆತ ಪೋಲೀಸರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ,
ಇದಕ್ಕೆ ಪ್ರತಿಯಾಗಿ ಸಿಪಿಐ ಮುನಿರಾಜು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿ ಶರಣಗುವಂತೆ ಕೇಳಿದ್ದಾರೆ. ಆದರೆ ರೋಹಿತ್ ಒಪ್ಪದ ಹಿನ್ನೆಲೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿದಲಾಗಿದೆ.

