ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ 7,438 ಕೋಟಿ ರೂ. ಮೊತ್ತವನ್ನು ದೇಶೀಯ ಹಾಗೂ ವಿದೇಶಿ ಅಭಿವೃದ್ಧಿ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲು ಹಾಗೂ ಮೂರು ಹಂತದ ಮೂರು ಮಾರ್ಗ ನಿರ್ಮಾಣಕ್ಕೆಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮೊದಲ ಹಂತದಲ್ಲಿ ಬೆಂಗಳೂರು-ದೇವನಹಳ್ಳಿ, ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಹಾಗೂ ಕೆಂಗೇರಿ-ವೈಟ್‌ಫೀಲ್ಡ್ ಮಾರ್ಗಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಸಾಲಿನ ಬಜೆಟ್‌ನಲ್ಲಿ 18,621 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿದೆ. ಬಳಿಕ ಪಿಪಿಪಿ ಮಾದರಿಯಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ. ಶೇ.60ರಷ್ಟು ಕೇಂದ್ರ-ರಾಜ್ಯ ಸರ್ಕಾರದ ಪಾಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲಿನ ಒಟ್ಟು ಯೋಜನಾ ವೆಚ್ಚ ಶೇ.60ರಷ್ಟು ಭಾಗವಾಗಿರುವ 7,438 ಕೋಟಿ ರೂ,ಗಳನ್ನು ಸಾಲದ ರೂಪದಲ್ಲಿ ಪಡೆಯಲು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಯೋಜನೆ ಸಲುವಾಗಿ ವಿಶೇಷ ಉದ್ದೇಶವಾಹಕವಾಗಿ ಸೂಚಿಸಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮೂಲಕ 7438 ಕೋಟಿ ರೂ. ಸಾಲ ಪಡೆಯಲು ಸಂಪುಟ ಒಪ್ಪಿಗೆ ನೀಡಿದೆ.
2029 ರಿಂದ ಮರುಪಾವತಿಯೊಂದಿಗೆ 30 ವರ್ಷಗಳ ಅವಧಿಗೆ 1.4% ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ರಾಜ್ಯವು ಮುಂದಾಗಿದೆ ಎಂದು ಮೂಲಗಳು ಸುಳಿವು ನೀಡಿವೆ. 60 ರಷ್ಟು ಸಾಲಕ್ಕಾಗಿ ಸಾಲ ಖಾತರಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಮಾನವಾಗಿ ಹಂಚಿಕೊಳ್ಳಲು ಉದ್ದೇಶಿಸಲಾಗಿದೆ.
ರೈಲ್ವೆ ಮತ್ತು ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿಯನ್ನು ಎಕರೆಗೆ ರೂ. 1 ರ ಗುತ್ತಿಗೆಗೆ ಗುತ್ತಿಗೆ ನೀಡಲು ಉದ್ದೇಶಿಸಲಾಗಿದ್ದು, ಸ್ವಾಧೀನಪಡಿಸಿಕೊಳ್ಳಬೇಕಾದ ಖಾಸಗಿ ಜಮೀನಿನ ವೆಚ್ಚವನ್ನು ರಾಜ್ಯ ಭರಿಸಲಿದ್ದು, ಈ ಯೋಜನೆ ಆರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪೂರ್ಣಗೊಂಡ ಉಪನಗರ ರೈಲು ಯೋಜನೆಯಿಂದ ವರ್ಷಕ್ಕೆ 1,178 ಕೋಟಿರೂ.ಆದಾಯ ಬರುವ ನಿರೀಕ್ಷೆಯಿದೆ.
Advertisement