'ಆಫೀಸು ಬೃಂದಾವನ ಅಂತಿದ್ರು, ಅಲ್ಲೇ ಅವರ ಕೊನೆಯ ದಿನ ಮುಗಿಯಿತು': ತಂದೆಯ ಬಗ್ಗೆ ಭಾವುಕರಾದ ಕರ್ಣ ಬೆಳಗೆರೆ

ಕನ್ನಡದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳೆಗೆರೆ ಮಧ್ಯರಾತ್ರಿ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂತಿಮ ಕ್ಷಣದಲ್ಲಿ ಏನಾಯಿತು ಎಂಬುದನ್ನು ಅವರ ಪುತ್ರ ಕರ್ಣ ಬೆಳಗೆರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕರ್ಣ ಬೆಳಗೆರೆ
ಕರ್ಣ ಬೆಳಗೆರೆ
Updated on

ಬೆಂಗಳೂರು: ಕನ್ನಡದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳೆಗೆರೆ ಮಧ್ಯರಾತ್ರಿ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂತಿಮ ಕ್ಷಣದಲ್ಲಿ ಏನಾಯಿತು ಎಂಬುದನ್ನು ಅವರ ಪುತ್ರ ಕರ್ಣ ಬೆಳಗೆರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮಧ್ಯರಾತ್ರಿ 12.15ರಿಂದ 12.20ರ ಸುಮಾರಿಗೆ ತಂದೆಯವರಿಗೆ ತೀವ್ರ ಹೃದಯಾಘಾತವಾಯಿತು. ಆಗ ಅವರು ಪದ್ಮನಾಭನಗರದ ಕಚೇರಿಯಲ್ಲಿದ್ದರು, ನಾನು ಮನೆಯಲ್ಲಿದ್ದೆ. ತಕ್ಷಣ ಅಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು, ನನಗೆ ಫೋನ್ ಬಂದ ತಕ್ಷಣ ನಾನು ಹೋಗುವಷ್ಟರಲ್ಲಿ ಅವರು ಪ್ರತಿಕ್ರಿಯಿಸುತ್ತಿರಲಿಲ್ಲ, ಆಮೇಲೆ ವೈದ್ಯರು ಪರೀಕ್ಷೆ ಮಾಡಿ ಬದುಕಿಲ್ಲ ಎಂದು ಹೇಳಿದರು ಎಂದು ಕರ್ಣ ಬೆಳಗೆರೆ ಕೊನೆ ಕ್ಷಣಗಳನ್ನು ವಿವರಿಸಿದ್ದಾರೆ. 

ಇವತ್ತು ನಮ್ಮ ಕುಟುಂಬವನ್ನು, ಅವರನ್ನು ನಂಬಿಕೊಂಡಿದ್ದವರನ್ನು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ತಂದೆ ನಮ್ಮ ಜೊತೆಯಲ್ಲಿಲ್ಲ, ನಮ್ಮ ಇಡೀ ಸಂಸಾರಕ್ಕೆ, ನಮ್ಮ ಮನೆಗೆ, ಅವರನ್ನು ನಂಬಿಕೊಂಡಿರುವ ಅಷ್ಟೂ ಜನಕ್ಕೆ ದುಃಖವಾಗಿದೆ ಎಂದಿದ್ದಾರೆ.

ತಂದೆಗೆ ದೊಡ್ಡ ಆಸೆ ಇತ್ತು, ಅವರು ಕಟ್ಟಿರುವ ಪ್ರಾರ್ಥನಾ ಶಾಲೆ ತುಂಬ ದೊಡ್ಡ ಮಟ್ಟಕ್ಕೆ ಬೆಳೆಯಬೇಕು, ನಾವೆಲ್ಲರೂ ಸೇರಿ ಶಾಲೆಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಬೇಕು ಎಂದೆಲ್ಲ ಹೇಳುತ್ತಿದ್ದರು, ನಮ್ಮ ಜೊತೆಗೆ ತಂದೆ ಇನ್ನಷ್ಟು ವರ್ಷಗಳ ಕಾಲ ಇರುತ್ತಾರೆ ಎಂದು ಅಂದುಕೊಂಡಿದ್ದೆವು. 

ಇಂದು ಸಂಜೆ ಬನಶಂಕರಿಯ ಚಿತಾಗಾರಕ್ಕೆ ಕರೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುತ್ತೇವೆ. ಅವರನ್ನು ಕೊನೆಯದಾಗಿ ನೋಡಲು ಬಯಸುವವರು ಬಂದು ದರ್ಶನ ಪಡೆದುಕೊಂಡು ಹೋಗಿ ಎಂದು ಮನವಿ ಮಾಡಿಕೊಂಡರು.

ತಂದೆ ಆರೋಗ್ಯವಾಗಿದ್ದರು: ಇತ್ತೀಚಿನ ದಿನಗಳಲ್ಲಿ ತಂದೆಯವರಿಗೆ ಡಯಾಬಿಟಿಸ್ ಮತ್ತು ಕೆಲವೊಂದು ಸಣ್ಣಪುಟ್ಟ ತೊಂದರೆಗಳು ಬಿಟ್ಟರೆ ಚೆನ್ನಾಗಿಯೇ ಇದ್ದರು. ಅವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅವರು, ಮೂರು ದಿನಗಳ ಹಿಂದೆ ನನ್ನ ಮನೆಗೆ ಅವರು ಬಂದು ನಾವೆಲ್ಲರೂ ಒಟ್ಟಿಗೆ ಕುಳಿತು ತುಂಬಾ ಹೊತ್ತು ಮಾತನಾಡಿದ್ದೆವು. ಖುಷಿಖುಷಿಯಾಗಿ ನಾಳೆ ಸಿಗೋಣ ಎಂದಿದ್ದರು. ಇವತ್ತು ನನ್ನ ಪುಟ್ಟ ಮಗ ಮನೆಗೆ ಬರುವವನಿದ್ದ.

ಎಲ್ಲಾ ಸಂಸಾರದಲ್ಲಿ ಅಪ್ಪ-ಮಗ ಮಾತನಾಡಿಕೊಳ್ಳುವಂತೆ ನಾವು ಮಾತನಾಡಿಕೊಳ್ಳುತ್ತಿದ್ದೆವು, ನೀನು ಎಲ್ಲಾ ಕೆಲಸ ಚೆನ್ನಾಗಿ ಮಾಡಿಕೊಂಡು ಹೋಗುತ್ತಿದ್ದೀಯಾ, ಇದನ್ನು ಮುಂದುವರಿಸು, ನೀನು ಚೆನ್ನಾಗಿ ಮಾಡಬೇಕು, ನಾನು ನಿನ್ನ ಜೊತೆಗೆ ಇರ್ತೀನಿ ಕಣೋ ಎಂದು ನಿನ್ನೆ ಹೇಳಿದ್ದರು, ಇವತ್ತು ಭೌತಿಕವಾಗಿ ಇಲ್ಲದಿದ್ದರೂ ನಮ್ಮ ಹೃದಯದಲ್ಲಿ, ಮನದಲ್ಲಿ ಯಾವಾಗಲೂ ಇರುತ್ತಾರೆ ಎಂದು ಕರ್ಣ ಬೆಳಗೆರೆ ಭಾವುಕರಾದರು. 

ತುಂಬಾ ಅನಿರೀಕ್ಷಿತವಾಗಿ ಘಟನೆ ನಡೆದುಹೋಗಿದೆ. ಘಟನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಆಫೀಸೇ ನನಗೆ ಬೃಂದಾವನ, ನಾನು ಅಲ್ಲೇ ಇರೋದು, ಅಲ್ಲೇ ನನ್ನ ಕೊನೆಯ ದಿನಗಳು ಮುಗಿಯಬೇಕು ಎಂದೇ ಅವರು ಯಾವಾಗಲು ಹೇಳುತ್ತಿದ್ದರು. ಅದೇ ನಿಜ ಆಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com