

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಕೇಸಿನ ಆರೋಪಿ ವೀರೇನ್ ಖನ್ನಾ ಅಕ್ರಮವಾಗಿ ಏಳು ವಿವಿಧ ಇಮೇಲ್ ಐಡಿಗಳನ್ನು ಬಳಸಿ ಆತ ಪೊಲೀಸ್ ಕಸ್ಟಡಿಯಲ್ಲಿರುವಾಗ ಆತನ ಸ್ನೇಹಿತರು ಸಾಕ್ಷಿಗಳನ್ನು ನಾಶಪಡಿಸಲು ಅವುಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 4ರ ಸ್ಯಾಂಡಲ್ ವುಡ್ ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ವೀರೇಂದರ್ ಖನ್ನಾರನ್ನು ಬಂಧಿಸಿತ್ತು. 2018ರಲ್ಲಿ ಬಾಣಸವಾಡಿ ಪೊಲೀಸರು ದಾಖಲಿಸಿದ್ದ ಮತ್ತೊಂದು ಎನ್ ಡಿಪಿಎಸ್ ಕೇಸಿಗೆ ಸಂಬಂಧಿಸಿದಂತೆ ಕೂಡ ವೀರೇನ್ ಖನ್ನಾ ಆರೋಪ ಎದುರಿಸುತ್ತಿದ್ದಾನೆ. ಇದಕ್ಕಾಗಿ ಆತ ವಿಶೇಷ ಕೋರ್ಟ್ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದಾನೆ.
ಅದಕ್ಕೆ ಪ್ರಾಸಿಕ್ಯೂಟರ್ ಸಲ್ಲಿಸಿರುವ ಆಕ್ಷೇಪದಲ್ಲಿ, ಡ್ರಗ್ ಕೇಸಿನಲ್ಲಿ ಬಂಧಿತರಾಗಿರುವ ಆರೋಪಿಗಳ ಜೊತೆ ಖನ್ನಾ ನೇರ ಸಂಪರ್ಕದಲ್ಲಿದ್ದ. ಖನ್ನಾ ಬಳಿ ಹಲವು ಇಮೇಲ್ ಐಡಿಗಳಿದ್ದವು. ಮೂರು ಇಮೇಲ್ ಅಕೌಂಟ್ ಗಳನ್ನು ತೆರೆದ ಖನ್ನಾ ಉಳಿದ ಅಕೌಂಟ್ ಗಳನ್ನು ತೆರೆಯಲು ನಿರಾಕರಿಸಿದ್ದ ಎಂದಿದ್ದಾರೆ.
ಸೆಪ್ಟೆಂಬರ್ 12 ರಂದು, ಅರ್ಜಿದಾರರ ಸಹಚರರು ಮಾಹಿತಿಯನ್ನು ನಾಶಮಾಡುವ ಉದ್ದೇಶದಿಂದ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ವಿಚಾರಣೆ ವೇಳೆ ಖನ್ನಾ, ಡ್ರಗ್ಸ್ ಸಂಗ್ರಹಣೆ, ಹಣಕಾಸು ಮತ್ತು ಇತರ ಆರೋಪಿಗಳಿಗೆ ಸೂಚನೆಗಳನ್ನು ನೀಡುವಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಬಹಿರಂಗಪಡಿಸಿದ್ದಾನೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
Advertisement