ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಟಿ.ಬಿ. ಸೊಲಬಕ್ಕನವರ್ ನಿಧನ

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ ಟಿ ಬಿ ಸೊಲಬಕ್ಕನವರ್ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ, ಅವರಿಗೆ 73 ವರ್ಷ ವಯಸ್ಸಾಗಿತ್ತು. 
ಡಾ ಟಿ ಬಿ ಸೊಲಬಕ್ಕನವರ್
ಡಾ ಟಿ ಬಿ ಸೊಲಬಕ್ಕನವರ್
Updated on

ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರು, ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ಹಿರಿಯ ರಂಗಕರ್ಮಿ ಡಾ.ಟಿ.ಬಿ. ಸೊಲಬಕ್ಕನವರ (73) ಶುಕ್ರವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.2.45ರ ಸುಮಾರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದೊಡ್ಡಾಟ, ಶಿಲ್ಪ ಕಲಾಕೃತಿಗಳಲ್ಲಿನ ಇವರ ಸೃಜನಶೀಲ ಪ್ರತಿಭೆ ಹಾಗೂ ಕೊಡುಗೆ ಪರಿಣಗಣಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿತ್ತು. ಇವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2002ರಲ್ಲಿ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಎಂದು ಪ್ರಶಸ್ತಿ ನೀಡಿತ್ತು. ಅಲ್ಲದೇ, 2001ರಲ್ಲಿ ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ, 2002ರಲ್ಲಿ ಸಂಘಟನಾ ಪ್ರಶಸ್ತಿ, 2005ರಲ್ಲಿ ರಾಜ್ಯೋತ್ಸವ ಹಾಗೂ 2006ರಲ್ಲಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು.

ಇನ್ನು, ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಲಿಮ್ಕಾ ಬುಕ್​ ಆಫ್ ರೆಕಾರ್ಡ್ಸ್, ಲಂಡನ್​ ರೆಕಾರ್ಡ್ ಹೋಲ್ಡರ್ಸ್​ ರಿಪಬ್ಲಿಕ್​, ಅಮೆರಿಕದ ರೆಕಾರ್ಡ್ ಸೆಕ್ಟರ್​, ನೇಪಾಳದ ಎವರೆಸ್ಟ್​ ವರ್ಲ್ಡ್​ ರೆಕಾರ್ಡ್, ಅಮೇಜಿಂಗ್ ವರ್ಲ್ಡ್ ರೆಕಾರ್ಡ್​, ಯೂನಿಕ್​ ವರ್ಲ್ಡ್​ ರೆಕಾರ್ಡ್​ಗಳಿಗೂ ಇವರು ಭಾಜನರಾಗಿದ್ದರು.

ಮೃತರು ಪತ್ನಿ ಸಾವಿತ್ರಮ್ಮ, ಪುತ್ರಿ ವೇದಾರಾಣಿ, ಪುತ್ರ ರಾಜಹರ್ಷ ಹಾಗೂ ಅಳಿಯ ಉದ್ಯಮಿ ಪ್ರಕಾಶ ದಾಸನೂರ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ರಾಕ್ ಗಾರ್ಡನ್ ಪಕ್ಕ ನ್ಯೂ ವರ್ಕ್ ಶಾಪ್ (ದುಂಡಸಿ ದಾರಿ) ಹತ್ತಿರ ನೆರವೇರಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ:
ನಾಡಿನ ಹಿರಿಯ ಕಲಾವಿದ ಡಾ. ಟಿ.ಬಿ. ಸೊಲಬಕ್ಕನವರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗಷ್ಟೇ ಕಲಾವಿದ ಸೊಲಬಕ್ಕನವರ ಕೈಚಳಕದಲ್ಲಿ ಅರಳಿದ ಮಾದರಿ ಪಾರಂಪರಿಕ ಗ್ರಾಮವನ್ನು ಜಕ್ಕೂರಿನಲ್ಲಿ ಉದ್ಘಾಟಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು,ಬಹುಮುಖ ಪ್ರತಿಭೆಯ ಟಿ.ಬಿ.ಸೊಲಬಕ್ಕನವರ ಅವರು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ದೊಡ್ಡಾಟ ಟ್ರಸ್ಟ್ ನ ಸಂಸ್ಥಾಪಕರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. 
 
ಹಾವೇರಿ ಜಿಲ್ಲೆಯಲ್ಲಿರುವ ರಾಕ್‌ ಗಾರ್ಡನ್, ಆಲಮಟ್ಟಿ ಮತ್ತಿತರ ಕಡೆಗಳಲ್ಲಿ ನಿರ್ಮಿಸಿರುವ ರಾಕ್ ಗಾರ್ಡನ್ ಗಳಲ್ಲಿ ಸೊಲಬಕ್ಕನವರ ತಮ್ಮ ಅಪೂರ್ವ ಕಲಾ ಕೌಶಲ್ಯವನ್ನು ಮೆರೆದಿದ್ದಾರೆ. ಇವರ ನಿಧನದಿಂದ ಕಲಾ ಜಗತ್ತಿನ ಅದ್ಭುತ ಪ್ರತಿಭೆಯನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. 
 
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೊಲಬಕ್ಕನನವರ ನಿಧನಕ್ಕೆ ಸೋಕ ವ್ಯಕ್ತಪಡಿಸಿದ್ದಾರೆ. ಡಾ|| ಟಿ. ಬಿ. ಸೋಲಬಕ್ಕನವರ ನಿಧನರಾಗಿದ್ದು ತೀವ್ರ ದುಃಖದ ವಿಷಯ, ಅವರ ನಿಧನದಿಂದ ಜಾನಪದ ಲೋಕದ ಪ್ರಮುಖ ಕೊಂಡಿ ಕಳಚಿದಂತಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com