ಸರ್ಕಾರಿ ಶಾಲೆಗಳ ಬಗ್ಗೆ ಯಾರಾದರು ಅಪಹಾಸ್ಯ ಮಾಡುವಾಗ ಮನಸ್ಸಿಗೆ ನೋವಾಗುತ್ತದೆ: ಸಚಿವ ಸುರೇಶ್ ಕುಮಾರ್

ನಮ್ಮ ಶಾಲೆಗಳ ಬಗ್ಗೆ ಯಾರಾದರೂ ಅಪಹಾಸ್ಯ ಮಾಡುವಾಗ, ಶಾಲೆಗಳ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ದೂರು ಕೇಳಿ ಬಂದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಸರ್ಕಾರಿ ಶಾಲೆ ದತ್ತು ಪಡೆದುಕೊಂಡವರಿಗೆ ದತ್ತು ಸ್ವೀಕಾರ ಪತ್ರ ವಿತರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಸರ್ಕಾರಿ ಶಾಲೆ ದತ್ತು ಪಡೆದುಕೊಂಡವರಿಗೆ ದತ್ತು ಸ್ವೀಕಾರ ಪತ್ರ ವಿತರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: ನಮ್ಮ ಶಾಲೆಗಳ ಬಗ್ಗೆ ಯಾರಾದರೂ ಅಪಹಾಸ್ಯ ಮಾಡುವಾಗ, ಶಾಲೆಗಳ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ದೂರು ಕೇಳಿ ಬಂದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಏಕೆಂದರೆ ನಮ್ಮ ಇಲಾಖೆಗೆ ಪ್ರತಿವರ್ಷ ಸಿಗುವ ಅನುದಾನದಲ್ಲಿ ಶೇಕಡ ಎಂಬತ್ತಕ್ಕೂ ಹೆಚ್ಚು ಹಣ ಅಪಾರ ಸಂಖ್ಯೆಯಲ್ಲಿರುವ ಶಿಕ್ಷಕರು ಹಾಗೂ ಸಿಬ್ಬಂದಿಯ ವೇತನಕ್ಕೆ ಖರ್ಚಾಗುತ್ತದೆ, ಹೀಗಾಗಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಕೊರತೆಯಿಂದಾಗಿ ಗುಣಮಟ್ಟ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಂದರೆ ಶಿಥಿಲವಾದ ಕೊಠಡಿಗಳ ನಿರ್ಮಾಣಕ್ಕೆ, ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ,  ಪ್ರಯೋಗಾಲಯಗಳ ನಿರ್ಮಾಣಕ್ಕೆ, ಶೌಚಾಲಯಗಳನ್ನು ಸುಸ್ಥಿತಿಯಲ್ಲಿ ಇಡುವುದಕ್ಕೆ ಅತ್ಯಂತ ಕಡಿಮೆ ಹಣ ಲಭ್ಯವಿರುತ್ತದೆ. ಇಂದು ಆ ಕೊರತೆಯನ್ನು ನೀಗಿಸಲು ಒಂದು ಪುಟ್ಟದಾದರೂ ಪ್ರಮುಖ ಕಾರ್ಯ ಪ್ರಾರಂಭವಾಗಿದೆ. ಅದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುವುದಾಗಿದೆ ಎಂದರು.

ರಾಜ್ಯದ ಎಲ್ಲಾ ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಲೋಕಸಭೆ - ರಾಜ್ಯಸಭೆಯ ಸದಸ್ಯರು ತಲಾ 3 ರಿಂದ 5ರವರೆಗೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು (ಖಾಸಗಿ ವಿಶ್ವವಿದ್ಯಾಲಯಗಳು ಸೇರಿದಂತೆ) ತಮ್ಮ ವ್ಯಾಪ್ತಿಯಲ್ಲಿ ಬರುವ ಕನಿಷ್ಠ ಹತ್ತು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇವೆ ಎಂದು ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಕನಿಷ್ಠ 1,500 ಶಾಲೆಗಳಿಗೆ ಅನುಕೂಲವಾಗುತ್ತದೆ. ಅಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳನ್ನೂ ನೀಗಿಸಲು ಸಹಾಯವಾಗುತ್ತದೆ ಎಂದು ಸಚಿವರು ಹೇಳಿದರು. 

ಇಂದು ಕೂಲಿ ಕೆಲಸ ಮಾಡುವ ಪೋಷಕರು ಕೂಡ ತಮ್ಮ ಮಕ್ಕಳನ್ನು ಎಷ್ಟೇ ಶುಲ್ಕವಾದರೂ ಸರಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗೆ ಕಳುಹಿಸಬೇಕೆಂದು ನೋಡುತ್ತಾರೆ. ಅವರ ದುಡಿಮೆಯ ಶೇಕಡಾ 20ರಷ್ಟು ಹಣ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ. ಪೋಷಕರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದನ್ನು ತಪ್ಪಿಸಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು ಮಕ್ಕಳಿಗೆ ಸಿಗಬೇಕಿದೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಉಚಿತ ಪುಸ್ತಕಗಳು, ಉಚಿತ ಸಮವಸ್ತ್ರ, ಮಧ್ಯಾಹ್ನದ ಊಟ  ಕೊಡುವ ಜೊತೆಗೆ ಉತ್ತಮ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ರೀತಿಯ ಶಿಕ್ಷಣ ನೀಡಿದಾಗ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂಬ ಹಂಬಲವುಳ್ಳ ಬಡ ಕುಟುಂಬಗಳಿಗೂ ವಿಶ್ವಾಸ ಹೆಚ್ಚುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com