ಸಿಎಂ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ: ಡಿಸ್ಚಾರ್ಜ್ ನಂತರ ಸಂತೋಷ್ ಹೇಳಿದ್ದೇನು?
ಬೆಂಗಳೂರು: ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್, ನನಗೆ ಆವತ್ತು ಅಜೀರ್ಣವಾಗಿತ್ತು, ಹೀಗಾಗಿ ಬೇರೆ ಮಾತ್ರೆ ಸೇವಿಸುವ ಬದಲು ನಿದ್ದೆ ಮಾತ್ರ ಸೇವಿಸಿದೆ ಎಂದು ಹೇಳಿದ್ದಾರೆ.
ನನಗೆ ಯಾವುದೇ ಒತ್ತಡವಿರಲಿಲ್ಲ, ನನಗೆ ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆ ಸೇವಿಸುತ್ತೇನೆ, ಯಾವಾಗಲೂ ಅರ್ಧ ಸೇವಿಸುತ್ತಿದ್ದೆ, ಮೊನ್ನೆ ಇಡೀ ಒಂದು ಮಾತ್ರೆ ನುಂಗಿದ್ದೆ, ಹೀಗಾಗಿ ಈ ಅಚಾತುರ್ಯವಾಯಿತು, ನಾನು ವಿಲ್ ಪವರ್ ಇರುವ ಮನುಷ್ಯ, ಆತ್ಮಹತ್ಯೆಗೆ ಯತ್ನಿಸುವವನಲ್ಲ ಎಂದು ಸಂತೋಷ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಡಿಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂತೋಷ್, ಉಪ ಚುನಾವಣೆ ಸೋಲಿನ ನಂತರ ಡಿಕೆಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರನ್ನು ಅವರ ಪಕ್ಷದ ಹಿರಿಯ ನಾಯಕರು ಯಾವುದಾದರೂ ಉತ್ತಮ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಒಂದೆರಡು ದಿನ ವಿಶ್ರಾಂತಿ ಪಡೆದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ