ಗದಗ: ಜಿಲ್ಲೆಯ ಲಕ್ಕುಂಡಿ ಐತಿಹಾಸಿಕ ದೇವಾಲಯಗಳಿಗೆ ಮಾತ್ರವಲ್ಲದೆ ಕಂಬಳಿಗಳಿಗೂ ಜನಪ್ರಿಯ. ಇಲ್ಲಿನ ನೇಯ್ಗೆಗಾರರು ಕೈಯಲ್ಲಿ ಸಾಂಪ್ರದಾಯಿಕವಾಗಿ ನೇಯ್ದು ಕಂಬಳಿಗಳನ್ನು ಸಿದ್ದಪಡಿಸುತ್ತಾರೆ.
ಕೇವಲ ನಮ್ಮ ರಾಜ್ಯಗಳಿಂದ ಮಾತ್ರವಲ್ಲದೆ ಇಲ್ಲಿಂದ ಕಂಬಳಿಗಳಿಗೆ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರಗಳಿಂದಲೂ ಬೇಡಿಕೆಗಳಿವೆ. ಚಳಿಗಾಲ ಆರಂಭವಾಗುವುದಕ್ಕೆ ಮೊದಲು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಲಕ್ಕುಂಡಿಗೆ ಬಂದು ಕಂಬಳಿ ಖರೀದಿಸಿಕೊಂಡು ಹೋಗುವವರು ಬೇಕಾದಷ್ಟು ಮಂದಿಯಿದ್ದರು. ಆದರೆ ಈ ವರ್ಷ ಕೊರೋನಾ ಸಾಂಕ್ರಾಮಿಕ, ಲಾಕ್ ಡೌನ್ ಕಾರಣದಿಂದಾಗಿ ಲಕ್ಕುಂಡಿ ಕಂಬಳಿಗಳಿಗೆ ಬೇಡಿಕೆ ಇಲ್ಲದಂತಾಗಿದೆ.
ಹಿಂದೆಲ್ಲಾ ಲಕ್ಕುಂಡಿಯಲ್ಲಿ ಕಂಬಳಿ ತಯಾರಿಸುವ 50ಕ್ಕೂ ಹೆಚ್ಚು ನೇಯ್ಗೆಗಾರರಿದ್ದರು. ಆದರೆ ಇತ್ತೀಚೆಗೆ ಅದು 15ಕ್ಕೆ ಇಳಿದಿದೆ. ಇತ್ತೀಚೆಗೆ ಇಲ್ಲಿನ ಕಂಬಳಿಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ನೇಯ್ಗೆ ಮಾಡುವವರು ಬೇರೆ ಉದ್ಯೋಗ ಅರಸಿಕೊಂಡು ಹೋಗುತ್ತಿದ್ದಾರೆ.
ಆದರೆ ಇನ್ನೂ ಹಲವು ಮಂದಿ ಈ ಲಕ್ಕುಂಡಿ ಕಂಬಳಿಯನ್ನು ಇಷ್ಟಪಡುವುದರಿಂದ ನೇಯ್ಗೆ ಕುಟುಂಬದವರು ಇಷ್ಟು ವರ್ಷ ಚಳಿಗಾಲ ಬಂತೆಂದರೆ ಒಂದೂವರೆಯಿಂದ 2 ಲಕ್ಷ ಹಣ ಸಂಪಾದಿಸುತ್ತಿದ್ದರು. ಆದರೆ ಈ ವರ್ಷ ಒಂದು ಲಕ್ಷ ಕೂಡ ನಮ್ಮ ಸಂಪಾದನೆ ದಾಟುವುದು ಸಂಶಯ ಎಂದು ನೇಯ್ಗೆಗಾರರೊಬ್ಬರು ಹೇಳುತ್ತಾರೆ.
ಲಕ್ಕುಂಡಿಯ ಕಂಬಳಿ ಅಷ್ಟು ಜನಪ್ರಿಯವಾಗಿರಲು ಕಾರಣ ಅದು ಕೈಯಿಂದ ನೇಯುವುದಾಗಿದ್ದು 20 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಕಂಬಳಿ ನೇಯುವವರು ಉತ್ತರ ಕರ್ನಾಟಕ ಭಾಗಗಳಾದ ಹಾವೇರಿ, ಬಾಗಲಕೋಟೆ ಮೊದಲಾದ ಕಡೆಗಳಿಂದ ಕಚ್ಚಾ ಸಾಮಗ್ರಿಗಳನ್ನು ತಂದು ಸಿದ್ದಪಡಿಸುತ್ತಾರೆ. ಗುಣಮಟ್ಟದ ಆಧಾರದಲ್ಲಿ ಒಂದೊಂದು ಕಂಬಳಿಗೆ 2 ಸಾವಿರದಿಂದ 3-3,500 ರೂಪಾಯಿಗಳಿರುತ್ತದೆ.
ಈ ಮಾರಾಟಗಾರರಿಗೆ ಅಂಗಡಿಯಾಗಲಿ, ಮಳಿಗೆಗಳಾಗಲಿ ಇಲ್ಲ, ಗ್ರಾಹಕರು ಬೇಕೆಂದರೆ ಅವರ ಮನೆಗಳಿಗೆ ಹೋಗಿ ಖರೀದಿಸಬೇಕು. ಆದರೆ ಈ ಬಾರಿ ಕೊರೋನಾ ಇರುವುದರಿಂದ ಯಾರೂ ಬರುತ್ತಿಲ್ಲ, ಈ ವರ್ಷ ನಮಗೆ ನಿಜಕ್ಕೂ ಕಷ್ಟವಾಗಿದೆ. ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ನಮಗೆ ಇದುವರೆಗೆ ತುಂಬಾ ಬ್ಯುಸಿ ವರ್ಷಗಳಾಗಿದ್ದವು. ನಾವು 200ಕ್ಕಿಂತ ಹೆಚ್ಚು ಕಂಬಳಿಗಳನ್ನು ಮಾರಾಟ ಮಾಡುತ್ತಿದ್ದೆವು. ಆದರೆ ಈ ಬಾರಿ ಗದಗ ಸುತ್ತಮುತ್ತದಿಂದ ಮಾತ್ರ ನಮಗೆ ಆರ್ಡರ್ ಬರುತ್ತಿದ್ದು ಕೇವಲ 14 ಮಾರಾಟವಾಗಿದೆ. ನೇಯ್ಗೆ ಮಾಡುತ್ತಿದ್ದ ಮಹಿಳೆಯರು ಬೇರೆ ದಿನಗೂಲಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದು ಲಕ್ಕುಂಡಿಯ ನೇಯ್ಗೆಗಾರರು ಹೇಳುತ್ತಾರೆ.
Advertisement