
ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಉಂಟಾಗಿರುವ ತಲ್ಲಣವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಾಗಲೇ ಕೊರೋನಾದ ಹೊಸ ತಳಿ ಮತ್ತೊಂದು ತಲೆಬಿಸಿಗೆ ಕಾರಣವಾಗಿದೆ.
ಹೊಸ ಅಧ್ಯಯನದ ಪ್ರಕಾರ ಕೊರೋನಾದ ಹೊಸ ತಳಿಯೊಂದು ಹಂದಿಗಳನ್ನು ಬಾಧಿಸುತ್ತಿದ್ದು, ಇದನ್ನು ಸ್ವೈನ್ ಅಕ್ಯೂಟ್ ಡಯಾರಿಯಾ ಸಿಂಡ್ರೋಮ್ ಕೊರೋನಾ ವೈರಸ್ (ಎಸ್ಎಡಿಎಸ್-ಸಿಒವಿ) ಎಂದು ಗುರುತಿಸಲಾಗಿದೆ.
ಕೊರೋನಾ ವೈರಸ್ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿದರೆ ಈ ಎಸ್ಎಡಿಎಸ್-ಸಿಒವಿ ಕರುಳಿನ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆರೋಗ್ಯದ ಮೇಲೆಯಷ್ಟೇ ಅಲ್ಲದೇ ಇದು ಹಂದಿ ಮಾಂಸ ಉತ್ಪನ್ನಗಳ ಮೇಲೆ ಆಧಾರಿತವಾಗಿರುವ ಉದ್ಯಮಗಳ ಮೇಲೆಯೂ ಪರಿಣಾಮ ಬೀರಿ ಆರ್ಥಿಕತವಾಗಿಯೂ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಚಾಪೆಲ್ ಹಿಲ್ ನ ನಾರ್ತ್ ಕೆರೊಲಿನಾದಲ್ಲಿ ಈ ಕುರಿತು ಸಂಶೋಧನೆ ನಡೆದಿದ್ದು, ಹಂದಿಗಳಲ್ಲಿ ಹರಡುವ ಎಸ್ಎಡಿಎಸ್-ಸಿಒವಿ ಕೊರೋನಾ ವೈರಸ್ ಮನುಷ್ಯರಿಗೂ ಹರಡುವ ಸಾಮರ್ಥ್ಯ ಹೊಂದಿದೆ. ಆದರೆ ಅದೃಷ್ಟವಶಾತ್ ಈ ವರೆಗೂ ಮನುಷ್ಯರಲ್ಲಿ ಈ ವೈರಾಣು ಹರಡಿಲ್ಲ. 2016 ರಲ್ಲಿ ಬಾವಲಿಗಳಲ್ಲಿ ಕಂಡಬಂದಿದ್ದ ವೈರಾಣು ಚೀನಾದಲ್ಲಿ ಹಂದಿಗಳಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ಈ ಬಗ್ಗೆ ಪೋರ್ಕ್ ಉದ್ಯಮಕ್ಕೂ ಸಹ ಅತ್ಯಂತ ಕಡಿಮೆ ಮಾಹಿತಿ ಇದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡದ ಪೋರ್ಕ್ ಉದ್ಯಮದ ಮೇಲೆ ಈಗಾಗಲೇ ಕೋವಿಡ್-19 ಕರಿನೆರಳು ಆವರಿಸಿದೆ. ಈ ಉದ್ಯಮದ ಮೇಲೆ ಆಧಾರವಾಗಿದ್ದವರು ತೀವ್ರ ನಷ್ಟ ಎದುರಿಸಬೇಕಾಗುತ್ತಿದೆ. ಆದರೆ ಹೊಸದಾಗಿ ಹಂದಿಗಳಿಗೆ ಯಾವುದೇ ವೈರಾಣುಗಳು ಹರಡಿರುವುದು ಕಂಡುಬಂದಿಲ್ಲ ಎನ್ನುತ್ತಾರೆ ದಕ್ಷಿಣ ಕನ್ನಡದಲ್ಲಿ ಪಿಗ್ ಫಾರ್ಮ್ ನಡೆಸುತ್ತಿರುವ ಬಿಎನ್ ನಾಗರಾಜ
ಸಧ್ಯಕ್ಕೆ ಈ ವೈರಾಣು ಹಂದಿಗಳಲ್ಲಿ ಕಂಡುಬಂದಿಲ್ಲವಾದರೂ ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತವಾಗಿದೆ ಎನ್ನುತ್ತಿದ್ದಾರೆ ಸಂಶೋಧಕರು.
Advertisement