ಡ್ರಗ್ ಮಾಫಿಯಾ ವಿರುದ್ಧ ಬಿಜೆಪಿ ಸಮರ:ಕನ್ನಡಿಗರು ಕೈ ಜೋಡಿಸಲು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕರೆ

ರಾಜ್ಯದಲ್ಲಿ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಲು ಬಿಜೆಪಿ ಸಜ್ಜಾಗಿದ್ದು ಎಲ್ಲರೂ ಸರ್ಕಾರ ಜೊತೆ ಕೈಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ಬಿಜೆಪಿ ಟ್ವಿಟ್ಟರ್ ಖಾತೆಯ ಚಿತ್ರ
ಬಿಜೆಪಿ ಟ್ವಿಟ್ಟರ್ ಖಾತೆಯ ಚಿತ್ರ

ಬೆಂಗಳೂರು:ರಾಜ್ಯದಲ್ಲಿ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಲು ಬಿಜೆಪಿ ಸಜ್ಜಾಗಿದ್ದು ಎಲ್ಲರೂ ಸರ್ಕಾರ ಜೊತೆ ಕೈಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಡ್ರಗ್ ಮಾಫಿಯಾ, ಅಕ್ರಮ ವಹಿವಾಟು ಜಾಲದಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು ಅದಕ್ಕೆ ವೇಗ ಪಡೆದುಕೊಳ್ಳಲು ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲಿಯೂ ನೆರವು ನೀಡಲಿದೆ.

ರಾಜ್ಯವು ಮಾದಕ ದ್ರವ್ಯ ಮುಕ್ತ ರಾಜ್ಯವಾಗುವುದನ್ನು ನೋಡಲು ಬಿಜೆಪಿ ಬದ್ಧವಾಗಿದೆ. ಈ ಪಿಡುಗನ್ನು ನಿರ್ಮೂಲನೆ ಮಾಡಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಹೇಯ ಹಾಗೂ ಅಪಾಯಕಾರಿ ಪಿಡುಗಿನಲ್ಲಿ ತೊಡಗಿರುವ ಯಾರೇ ಆಗಲಿ ಎಲ್ಲರನ್ನೂ, ಎಷ್ಟೇ ದೊಡ್ಡವರಾಗಿರಲಿ ಅವರ ಸಾಮಾಜಿಕ, ರಾಜಕೀಯ ಪ್ರಭಾವ, ಸ್ಥಾನಮಾನದ ಹೊರತಾಗಿಯೂ ಕಾನೂನು ವ್ಯಾಪ್ತಿಗೆ ತರಲೇಬೇಕು. ಮಾದಕ ದ್ರವ್ಯ ಮಾಫಿಯಾ ವಿರುದ್ಧ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಬಿಜೆಪಿ ಕೈಜೋಡಿಸುತ್ತದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪೊಲೀಸರಿಗೆ ಈ ಪ್ರಕರಣದಲ್ಲಿ ಮುಕ್ತವಾಗಿ ತನಿಖೆ ಮಾಡಲು ಅಧಿಕಾರ ನೀಡಲಾಗಿದೆ. ಮಾದಕ ದ್ರವ್ಯ ಮಾಫಿಯಾ ವಿರುದ್ಧದ ತನಿಖೆ ನಿರ್ಣಾಯಕ ಘಟ್ಟ ತಲುಪಲೇಬೇಕು. ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುವವರೆಗೆ ವಿರಮಿಸುವುದಿಲ್ಲ.
ಡ್ರಗ್ ಮಾಫಿಯಾ ವಿರುದ್ಧ ಸಮರವನ್ನು ಸಾರಲು ಮುಂಚೂಣಿ ವಹಿಸುತ್ತಿದ್ದು, ರಾಜ್ಯದ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com