ಐಎಂಎ ಹಗರಣ: ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಐವರ ತನಿಖೆಗೆ ಸರ್ಕಾರದ ಅನುಮತಿ

ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ ಸೇರಿ ಐವರು ಪೊಲೀಸ್‌ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ.
ಅಜಯ್ ಹಿಲೋರಿ ಮತ್ತು ಹೇಮಂತ್ ನಿಂಬಾಳ್ಕರ್
ಅಜಯ್ ಹಿಲೋರಿ ಮತ್ತು ಹೇಮಂತ್ ನಿಂಬಾಳ್ಕರ್
Updated on

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ ಸೇರಿ ಐವರು ಪೊಲೀಸ್‌ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ.

ಇಬ್ಬರು ಐಪಿಎಸ್‌ ಅಧಿಕಾರಿಗಳಾದ ಅಜಯ್ ಹಿಲೋರಿ ಮತ್ತು ಹೇಮಂತ್ ನಿಂಬಾಳ್ಕರ್ ಜತೆಗೆ ಡಿವೈಎಸ್ಪಿ ಇ.ಬಿ. ಶ್ರೀಧರ್‌, ಇನ್ಸ್‌ಪೆಕ್ಟರ್‌ ಎಂ. ರಮೇಶ್‌ ಮತ್ತು ಎಸ್‌ಐ ಗೌರಿಶಂಕರ್‌ ವಿಚಾರಣೆಗೆ ಅನುಮತಿ ನೀಡಲಾಗಿದೆ.

ಹಗರಣದಲ್ಲಿ ಈ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ, ಈ ಅಧಿಕಾರಿಗಳ ವಿರುದ್ಧ, ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ –2004’ (ಕೆಪಿಐಡಿಎಫ್‌ಇ) ಅಡಿ ಪ್ರಾಸಿಕ್ಯೂಷನ್‌ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ ಪತ್ರ ಬರೆದಿತ್ತು. 

ಐಎಂಎ ಹಗರಣಕ್ಕೆ ಸಂಬಂಧಿಸಿ ಸಿಬಿಐ 2019ರ ಆಗಸ್ಟ್‌ 30ರಂದು ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಅಲ್ಲದೇ, ಇದೇ ಫೆಬ್ರವರಿಯಲ್ಲಿ ನಿಂಬಾಳ್ಕರ್ ಹಾಗೂ ಹಿಲೊರಿ ವಿರುದ್ಧವೂ ಎಫ್ಐಆರ್ ದಾಖಲಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ, ಹೇಮಂತ್ ನಿಂಬಾಳ್ಕರ್ ಮತ್ತು ಅಜಯ ಹಿಲೊರಿ ಅವರು ಐಎಂಎ ಪರವಾಗಿ ವರದಿ ಸಿದ್ಧಪಡಿಸಿ ಕ್ಲೀನ್ ಚಿಟ್
ನೀಡಿದ್ದನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಪತ್ರ ಬರೆದಿತ್ತು.

ಸಿಐಡಿಯಲ್ಲಿ 2018-19ರ ಅವಧಿಯಲ್ಲಿ ಐಜಿಪಿ ಆಗಿದ್ದ ಹೇಮಂತ್‌ ನಿಂಬಾಳ್ಕರ್‌, ಆರ್‌ಬಿಐ ಸೂಚನೆ ಮೇರೆಗೆ ಐಎಂಎ ವಿರುದ್ಧ ತನಿಖೆ ನಡೆಸಿದ್ದರು. ಆದರೆ ಮನ್ಸೂರ್‌ ಅಲಿ ಖಾನ್‌ಗೆ ಅನುಕೂಲಕರ ವರದಿ ಸಲ್ಲಿಸಿದ್ದರು. ಅಲ್ಲದೆ ಐಎಂಎ ಪರವಾಗಿ ಕೆಲಸ ಮಾಡುವಂತೆ ಅಂದಿನ ಉಪವಿಭಾಗಾಧಿಕಾರಿ ಎಲ್‌. ಸಿ. ನಾಗರಾಜು ಮೇಲೆ ಒತ್ತಡ ಹೇರಿದ್ದರು. ಈ ಕೆಲಸಗಳಿಗೆ ಮನ್ಸೂರ್‌ ಖಾನ್‌ನಿಂದ ಭಾರೀ ಮೊತ್ತದ ಹಣ ಮತ್ತು ವಸ್ತುಗಳನ್ನು ಪಡೆದಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ಅವರು 2017ರ ಜ.1ರಿಂದ 2018ರ ಅ.16ರ ನಡುವೆ ಅಧಿಕಾರ ದುರುಪಯೋಗಪಡಿಸಿಕೊಂಡು ಐಎಂಎ ಅಕ್ರಮಗಳನ್ನು ಮುಚ್ಚಿಡಲು ವಿವಿಧ ಹಂತಗಳಲ್ಲಿ ಐಎಂಎ ಕಂಪನಿಯ ನಿರ್ದೇಶಕ ನಿಜಾಮುದ್ದೀನ್‌ ಮತ್ತು ಇತರರಿಂದ ಲಂಚ ಪಡೆದಿದ್ದಾರೆ. ಅಲ್ಲದೆ, ತಮ್ಮ ಮನೆಯ ಒಳಾಂಗಣ ವಿನ್ಯಾಸ ಸಾಮಗ್ರಿಗಳನ್ನು
ಐಎಂಎ ಮೂಲಕ ಪಡೆದಿದ್ದಾರೆ. ಈ ಮೂಲಕ ಐಎಂಎ ಅಕ್ರಮ ಮುಂದುವರೆಯಲು ನೆರವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ರಾಜ್ಯ ಡಿಜಿಪಿ ಸೂಚನೆ ಮೇರೆಗೆ ಸಿಐಡಿಯ ಆರ್ಥಿಕ ಅಪರಾಧ ದಳದ ಡಿಐಜಿಪಿ ಹೇಮಂತ್‌ ನಿಂಬಾಳ್ಕರ್‌ ನೇತೃತ್ವದಲ್ಲಿ ತನಿಖೆಗೆ ವಹಿಸಲಾಗಿತ್ತು. ಇವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಇ.ಬಿ ಶ್ರೀಧರ್‌ ವಿಚಾರಣೆ ನಡೆಸಿ, ಐಎಂಎ ಕಂಪನಿಯು ಹಣಕಾಸು ಸಂಸ್ಥೆಗಳ ಅಡಿಯಲ್ಲಿ ಬರುವುದಿಲ್ಲವಾದ ಕಾರಣ ಕೆಪಿಐಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗದು. ಐಎಂಎ ಸಂಗ್ರಹಿಸಿದ ಹಣವನ್ನು ಡೆಪಾಸಿಟ್‌ ಎನ್ನಲಾಗದು ಎಂದು ವಿಚಾರಣೆ ಮುಗಿಸಿ ಷರಾ ಬರೆದು ಡಿಜಿಪಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು  ಬೆಂಗಳೂರು ಉತ್ತರ ವಿಭಾಗದ ಅಂದಿನ ಎ.ಸಿ. ಎಲ್‌.ಸಿ ನಾಗರಾಜ್‌ ಅವರಿಗೆ ಡಿಸಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಸಲ್ಲಿಕೆಯಾಗಿತ್ತು. ಈ ಮೂಲಕ ಐಎಂಎ ಕಂಪನಿಯ ಮನ್ಸೂರ್‌ಖಾನ್‌ನನ್ನು ಕಾನೂನು ಕ್ರಮಗಳಿಂದ ರಕ್ಷಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com