ಸ್ಯಾಂಡಲ್ ವುಡ್ ಡ್ರಗ್ಸ್ ಕೇಸು: ಮಾದಕ ಲೋಕ, ವೇಶ್ಯಾವಾಟಿಕೆ ಬಗ್ಗೆ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ ಮಹತ್ವದ ಸಾಕ್ಷಿ

ಅಕ್ರಮ ಡ್ರಗ್ಸ್ ಕೇಸಿನಲ್ಲಿ ನಗರ ಅಪರಾಧ ದಳ(ಸಿಸಿಬಿ) ನಡೆಸುತ್ತಿರುವ ತನಿಖೆಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಯುತ್ತಿರುವಾಗ ದೇಶಾದ್ಯಂತ ಡ್ರಗ್ಸ್ ಮತ್ತು ವೇಶ್ಯಾವಾಟಿಕೆಯ ದಂಧೆ ಒಂದೊಂದೇ ಅಕ್ರಮ ಬಯಲಿಗೆ ಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಕ್ರಮ ಡ್ರಗ್ಸ್ ಕೇಸಿನಲ್ಲಿ ನಗರ ಅಪರಾಧ ದಳ(ಸಿಸಿಬಿ) ನಡೆಸುತ್ತಿರುವ ತನಿಖೆಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಯುತ್ತಿರುವಾಗ ದೇಶಾದ್ಯಂತ ಡ್ರಗ್ಸ್ ಮತ್ತು ವೇಶ್ಯಾವಾಟಿಕೆಯ ದಂಧೆ ಒಂದೊಂದೇ ಅಕ್ರಮ ಬಯಲಿಗೆ ಬರುತ್ತಿದೆ.

ಆಹ್ವಾನದ ಮೇರೆಗೆ ಬಂದ ಅತಿಥಿಗಳಿಗೆ ಆಯೋಜಿಸುತ್ತಿದ್ದ ಅತಿ ಪ್ರತಿಷ್ಠಿತ ಪಾರ್ಟಿಗಳಲ್ಲಿ ಬಳಕೆಯಾಗುತ್ತಿದ್ದ ಡ್ರಗ್ಸ್ ಸೇವನೆ, ವೇಶ್ಯಾವಾಟಿಕೆ ಬಗ್ಗೆ ಪೊಲೀಸರಿಗೆ ಪ್ರಮುಖ ಸಾಕ್ಷಿಗಳು ಸಿಕ್ಕಿವೆ ಎಂದು ನಗರ ಅಪರಾಧ ದಳ ಪೊಲೀಸರು ಹೇಳುತ್ತಾರೆ. ಪಾರ್ಟಿಗಳ ಹೆಸರಿನಲ್ಲಿ ಅವು ನಡೆಯುವ ಸ್ಥಳಗಳನ್ನು ವೇಶ್ಯಾವಾಟಿಕೆ ಮತ್ತು ಡ್ರಗ್ಸ್ ದಂಧೆಗೆ ಬಳಸಲಾಗುತ್ತದೆ ಎಂದು ಉನ್ನತ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕೆಲವು ಹೈ ಎಂಡ್ ಪಾರ್ಟಿಗಳು ನಗರದ ಪ್ರಮುಖ ಹೊಟೇಲ್ ಗಳಲ್ಲಿ ನಡೆಯುತ್ತವೆ. ಈ ಅಕ್ರಮ ಚಟುವಟಿಕೆಗಳಲ್ಲಿ ಹೊಟೇಲ್ ಗಳು ಕೂಡ ಭಾಗಿಯಾಗಿವೆಯೇ ಎಂದು ಪತ್ತೆಹಚ್ಚಬೇಕಿದೆ ಎನ್ನುತ್ತಾರೆ ತನಿಖಾಧಿಕಾರಿಗಳು. ಈಗಾಗಲೇ ಸಿಕ್ಕಿಬಿದ್ದಿರುವ ಆರೋಪಿಗಳ ಇಮೇಲ್ ಗಳು, ವಾಟ್ಸಾಪ್ ಚಾಟ್ ಗಳು, ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸಾಕಷ್ಟು ಮಾಹಿತಿಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿವೆ.

ಸಿಸಿಬಿ ಪೊಲೀಸರು ಇಬ್ಬರು ಆಫ್ರಿಕನ್ನರಾದ ಲೂಮ್ ಪೆಪ್ಪರ್ ಸಾಂಬಾ ಮತ್ತು ಒಸ್ಸಿ ಫಿಲಿಪ್ಸ್ ನನ್ನು ಬಂಧಿಸಿದ್ದು ಅವರು ಈಗ ಬಂಧಿತರಾಗಿರುವ ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ ಸೋಮವಾರ ಸಿಸಿಬಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ನಾರ್ಕೊಟಿಕ್ ಕೇಸಿಗೆ ಸಂಬಂಧಪಟ್ಟಂತೆ ವಿಶೇಷ ಎನ್ ಡಿಪಿಎಸ್ ಕೋರ್ಟ್ ಮುಂದೆ ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ, ರಾಹುಲ್ ಥೋನ್ಸೆ ಬಗ್ಗೆ ಮಾಹಿತಿಗಳಿವೆ. ನ್ಯಾಯಾಲಯ ಇವರು ಮೂವರಿಗೂ ಜಾಮೀನು ನಿರಾಕರಿಸಿದೆ.

ಈ ಮಧ್ಯೆ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಮಾಹಿತಿ ಪ್ರಕಾರ, ಸಿಸಿಬಿ ಪೊಲೀಸರಿಗೆ ಈ ಕೇಸಿನಲ್ಲಿ ಪ್ರಮುಖವಾಗಿ ಬೇಕಾಗಿರುವ ತಲೆಮರೆಸಿಕೊಂಡಿರುವ ಆದಿತ್ವ ಆಳ್ವ ಮತ್ತು ಶಿವಪ್ರಕಾಶ್ ಚಪ್ಪಿ ಬಗ್ಗೆ ನಿಖರ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಡ್ರಗ್ ಕೇಸುಗಳ ತನಿಖೆ ನಡೆಸಲು ಎಸ್ ಐಟಿಯನ್ನು ನೇಮಕ ಮಾಡಲು ಕೋರಿದ್ದ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್: ಡ್ರಗ್ಸ್ ದಂಧೆಯಲ್ಲಿ ಉನ್ನತ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ನಗರ ಮೂಲದ ಕಾರ್ಯಕರ್ತ ಮತ್ತು ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನಿನ್ನೆ  ವಿಲೇವಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿ, ಎಸ್‌ಐಟಿ ತನಿಖೆ ಅಗತ್ಯವಿರುವ ನಿರ್ದಿಷ್ಟ ಪ್ರಕರಣವನ್ನು ಎತ್ತಿ ತೋರಿಸದೆ ಅರ್ಜಿದಾರರು ಅಸ್ಪಷ್ಟ ಮನವಿ ಮಾಡಿದ್ದಾರೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com