ಕೇಂದ್ರ ಸಮ್ಮತಿಸಿದರೆ ಕೊರೋನಾ ಮುಕ್ತ ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲು ಚಿಂತನೆ: ಸಿಎಂ ಯಡಿಯೂರಪ್ಪ
ಕೇಂದ್ರದ ಅನುಮೋದನೆ ಸಿಕ್ಕಿದರೆ ಕೊರೋನಾವೈರಸ್ ಸೋಂಕಿನಿಂದ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
Published: 08th April 2020 04:45 PM | Last Updated: 08th April 2020 05:08 PM | A+A A-

ಬಿಎಸ್ ಯಡಿಯೂರಪ್ಪ
ಬೆಂಗಳೂರು: ಕೇಂದ್ರದ ಅನುಮೋದನೆ ಸಿಕ್ಕಿದರೆ ಕೊರೋನಾವೈರಸ್ ಸೋಂಕಿನಿಂದ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ.
ಏಪ್ರಿಲ್ 14 ರ ನಂತರ, 21 ದಿನಗಳ ಲಾಕ್‌ಡೌನ್ ಕೊನೆಯಾಗಲಿದ್ದು, ರಾಜ್ಯದ ಆದಾಯ ಹೆಚ್ಚಳಕ್ಕೆ ಅನುವಾಗುವಂತೆ ಸರ್ಕಾರವು ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಸಡಿಲಿಸಲು ಉದ್ದೇಶಿಸಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಶಾಸಕರ ವೇತನ ಶೇ 30 ರಷ್ಟು ಕಡಿತ ಮಾಡಲಾಗುತ್ತಿದೆ. ಇನ್ನು ರಾಜ್ಯದ 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ.
ಬುಧವಾರದವರೆಗೆ, ರಾಜ್ಯದಲ್ಲಿ ಐವರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು 28 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 181 ಕೋವಿಡ್-19 ಪ್ರಕರಣಗಳು ದಾಖಲಾಗಿದೆ. ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಲಾಕ್-ಡೌನ್ ಮುಂದುವರಿಕೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ರಾಜ್ಯಗಳಿಗೆ ಪ್ರಧಾನಿ ಸೂಚಿಸಿದರೆ, ಕೊರೋನಾವೈರಸ್ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್-ಡೌನ್ ತೆರವು ಮಾಡಬಹುದೆಂಬುದು ನನ್ನ ನಿಲುವಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನ ಮಂತ್ರಿಯ ಅನುಮೋದನೆ ಪಡೆದ ನಂತರ ಏಪ್ರಿಲ್ 14 ರ ಬಳಿಕ ಜನರು ಆಯಾ ಜಿಲ್ಲೆಗಳೊಳಗೇ ತಮ್ಮ ವ್ಯವಹಾರವನ್ನು ಮಾಡಿಕೊಳ್ಳಲು ಅನುಮತಿಸಲಾಗುತ್ತದೆ. ಆದರೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸುವುದಕ್ಕೆ ಅನುಮತಿ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.