ಖ್ಯಾತ ರಂಗಕರ್ಮಿ, ಲೇಖಕ ಉದ್ಯಾವರ ಮಾಧವ ಆಚಾರ್ಯ ನಿಧನ

ಖ್ಯಾತ ರಂಗಕರ್ಮಿ, ಲೇಖಕ, ಉಪನ್ಯಾಸಕ ಉದ್ಯಾವರ ಮಾಧವ ಆಚಾರ್ಯ (80) ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಉದ್ಯಾವರ ಮಾಧವ ಆಚಾರ್ಯ
ಉದ್ಯಾವರ ಮಾಧವ ಆಚಾರ್ಯ

ಉಡುಪಿ: ಖ್ಯಾತ ರಂಗಕರ್ಮಿ, ಲೇಖಕ, ಉಪನ್ಯಾಸಕ ಉದ್ಯಾವರ ಮಾಧವ ಆಚಾರ್ಯ (80) ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಕಥೆಗಾರರಾಗಿ, ಲೇಖಕರಾಗಿ, ಸಹೃದಯ ಕವಿಗಳಾಗಿ, ಯಕ್ಷಲೋಕದ ಯಾತ್ರಿಕರಾಗಿ, ನಟ, ನಿರ್ದೇಶಕರಾಗಿ, ಮೋಡಿ ಮಾಡುವ ಮಾತುಗಾರರಾಗಿ, ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ದಿ ಪಡೆದಿದ್ದ ಮಾಧವ ಆಚಾರ್ಯ. 25-03-1941ರಲ್ಲಿ  ಜನಿಸಿದ್ದರು. ಇವರ ತಂದೆ ದಿ. ಲಕ್ಷ್ಮಿನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದರು.

ಉಡುಪಿಯ ಕಲ್ಯಾಣಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಮಾಧವ ಆಚಾರ್ಯ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆದರೆ ಕಥೆ, ಕವನ, ಪ್ರಬಂಧ್ ಸಂಕಲನ ಹಾಗೂ ನಾಟಕಗಳ ರಚಿಸಿ ಖ್ಯಾತರಾದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದ ಉದ್ಯಾವರ ಮಾಧವ ಆಚಾರ್ಯ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು.

ದೂರದರ್ಶನದ ಪ್ರಸಿದ್ಧ ಧಾರಾವಾಹಿ "ಗುಡ್ಡದ ಭೂತ"ದಲ್ಲಿ ಅಭಿನಯಿಸಿದ್ದ ಮಾಧವ ಆಚಾರ್ಯ ಉಡುಪಿ ಸಮೂಹ ಸಂಸ್ಥೆಯ ಸ್ಥಾಪಕರೂ ಹೌದು. ಈ ಸಂಸ್ಥೆಯ ಮೂಲಕ ದೇಶ ವಿದೇಶಗಳಲ್ಲಿ ನಾಟಕ, ರೂಪಕಗಳ ಪ್ರದರ್ಶನ ನೀಡೀದ್ದರು.

ಬಾಗಿದ ಮರ, ಭಾಗದೊಡ್ಡಮ್ಮನ ಕಥೆ, ಅಪರಾಧ ಸಹಸ್ರಾಣಿ ಕಥೆ ಕಥಾ ಸಂಕಲನಗಳು, ರಂಗಸ್ಥಳದ ಕನವರಿಕೆಗಳು, ಹೂ ಮಿಡಿ ಹಾಡು ಕವನ ಸಂಕಲನಗಳು, ಎದೆಯೊಳಗಣ ದೀಪ, ಗೋಡೆ, ಕೃಷ್ಣನ ಸೋಲು, ರಾಣಿ ಅಬ್ಬಕ್ಕ ದೇವಿ, ಗಾಂಧಾರಿ, ರಾಧೆ ಎಂಬ ಗಾಥೆ, ನೆನಪೆಂಬ ನವಿಲುಗರಿ ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿದ್ದರು.

ರಂಗಪ್ರಬಂಧಗಳು, ನೃತ್ಯ ಪ್ರಬಂಧಗಳು, ಯಕ್ಷಪ್ರಬಂಧಗಳು, ಸಾಹಿತ್ಯ ಸ್ಪಂದನ ಸೇರಿ ಹಲವಾರು ಪ್ರಬಂಧ ಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ. ಸಮೂಹ ಎಂಬ ಪರಿಕಲ್ಪನೆಯಲ್ಲಿ ಒಂದು ಲಾಂಛನವನ್ನು ರೂಪಿಸಿ ಸುಮಾರು ೧೯೫೦-೫೧ರಿಂದ ಇದುವರೆಗೆ ಸಂಯೋಜಿಸಿದ, ನಿರ್ದೇಶಿಸಿದ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಇವರದು. ಮಂಗಳೂರು ಆಕಾಶವಾಣಿಯ ಕಲಾವಿದರಾಗಿರುವ ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.

1997ರಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ರಂಗಭೂಮಿ ಕಲಾಸಂಸ್ಥೆಯಿಂದ 'ರಂಗವಿಶಾರದ' ಬಿರುದು, 1999ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮಾತ್ರವಲ್ಲದೆ ನೇಕ ರಂಗಭೂಮಿ, ಸಾಹಿತ್ಯಿಕ, ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com