ಮಾರ್ಚ್ ಎರಡನೇ ವಾರ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಎಸ್ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ
7ನೇ ತರಗತಿಗೆ ಈ ವರ್ಷ ಮಾರ್ಚ್ ಎರಡನೇ ವಾರದಲ್ಲಿ ಪಬ್ಲಿಕ್ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.
Published: 08th February 2020 08:59 AM | Last Updated: 08th February 2020 06:58 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: 7ನೇ ತರಗತಿಗೆ ಈ ವರ್ಷ ಮಾರ್ಚ್ ಎರಡನೇ ವಾರದಲ್ಲಿ ಪಬ್ಲಿಕ್ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಇಲಾಖೆ, ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 7ನೇ ತರಗತಿ ವಾರ್ಷಿಕ ಪರೀಕ್ಷೆಗಳು ಈ ವರ್ಷ ಒಂದೇ ಸಮಯದಲ್ಲಿ ನಡೆಯಲಿದ್ದು ಪ್ರಶ್ನೆ ಪತ್ರಿಕೆಗಳನ್ನು ಒಂದು ಕೇಂದ್ರದಲ್ಲಿ ತಯಾರಿಸಿ ನಂತರ ಅದನ್ನು ಎಲ್ಲಾ ಶಾಲೆಗಳಿಗೆ ವಿತರಿಸಲಾಗುವುದು(ಎಸ್ಎಸ್ಎಲ್ ಸಿ ಪರೀಕ್ಷೆ ಮಾದರಿ). ಆದರೆ ಬೇರೆ ತರಗತಿಗಳಿಗೆ ಹೋಲಿಸಿದರೆ ಮೌಲ್ಯಮಾಪನ ಕಟ್ಟುನಿಟ್ಟಾಗಿರುತ್ತದೆ. ವಿದ್ಯಾರ್ಥಿಗಳ ಫಲಿತಾಂಶವನ್ನು ವಿದ್ಯಾರ್ಥಿ ಸಾಧನೆ ಪತ್ತೆ ವ್ಯವಸ್ಥೆ(ಸ್ಯಾಟ್ಸ್) ಸಾಫ್ಟ್ ವೇರ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಹೇಳಿದೆ.
ಪ್ರಶ್ನೆಪತ್ರಿಕೆ ವಿತರಣೆಗೆ ಸ್ಯಾಟ್ಸ್ ಅಂಕಿಅಂಶ ಬಳಸಲಾಗುತ್ತದೆ. ಹೀಗಾಗಿ ಫೆಬ್ರವರಿ 5ರೊಳಗೆ ವಿದ್ಯಾರ್ಥಿಗಳ ಮಾಹಿತಿಗಳನ್ನು ಅಪ್ ಡೇಟ್ ಮಾಡುವಂತೆ ಸೂಚಿಸಲಾಗಿತ್ತು. ವಿದ್ಯಾರ್ಥಿಗಳ ಮಾಧ್ಯಮ, ವಿದ್ಯಾರ್ಥಿ ಸಂಖ್ಯೆ, ಭಾಷಾ ವಿಷಯಗಳು ಇತ್ಯಾದಿಗಳಲ್ಲಿ ವ್ಯತ್ಯಾಸ ಕಂಡುಬಂದರೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜವಾಬ್ದಾರಿಯಲ್ಲ ಎಂದು ಇಲಾಖೆ ಆದೇಶದಲ್ಲಿ ಹೇಳಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2019ರ ಪ್ರಕಾರ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಅವರು ಹತ್ತನೇ ತರಗತಿ ತಲುಪುವುದರ ಮೊದಲು ಅವರಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸಲು ಶಿಕ್ಷಣ ಸಚಿವರ ನೇತೃತ್ವದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.
ಶಿಕ್ಷಣ ಇಲಾಖೆಯ ಸಹವರ್ತಿಗಳು, ಪೋಷಕರು, ಶಿಕ್ಷಕರ ಬಳಿ ಸಲಹೆ, ಅಭಿಪ್ರಾಯ ಕೇಳಿ ಈ ವರ್ಷ ಕ್ರಮ ಕೈಗೊಳ್ಳಲಾಗಿದೆ. ನಿರಂತರ ಸಮಗ್ರ ಮೌಲ್ಯಮಾಪನವನ್ನು ಗಮನದಲ್ಲಿಟ್ಟುಕೊಂಡು ಸಹ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. 7ನೇ ತರಗತಿಯಲ್ಲಿ ಈ ರೀತಿ ಪಬ್ಲಿಕ್ ಪರೀಕ್ಷೆ ನಡೆಸಲು ಇಲಾಖೆಗೆ ಹೆಚ್ಚುವರಿ 6 ಲಕ್ಷದ 40 ಸಾವಿರದ 664 ರೂಪಾಯಿಗಳು ಬೇಕಾಗಿದೆ ಎಂದು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು ಆತಂಕಗೊಳ್ಳುವುದು ಬೇಡ: 7ನೇ ತರಗತಿಯಲ್ಲಿ ಈ ಬಾರಿ ಪಬ್ಲಿಕ್ ಪರೀಕ್ಷೆ ಎಂದು ವಿದ್ಯಾರ್ಥಿಗಳು ಆತಂಕ, ಗಾಬರಿಪಡುವ ಅಗತ್ಯವಿಲ್ಲ. ಇಂದಿನ ಸ್ಪರ್ಧಾತ್ಮಕ ಪರೀಕ್ಷಾ ವಿಧಾನಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು, ಜಿಲ್ಲಾ ಮತ್ತು ಶಾಲಾ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಯಾವ ರೀತಿ ಸಿಗುತ್ತಿದೆ, ಅವರ ಕಲಿಕೆ ಗುಣಮಟ್ಟ ಹೇಗಿದೆ ಎಂದು ತಿಳಿದುಕೊಳ್ಳಲು, ಪೋಷಕರಿಗೆ ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಪ್ರೌಢ ಶಿಕ್ಷಣಕ್ಕೆ ರೂಪಿಸಲು ಮತ್ತು 10ನೇ ತರಗತಿ ಪರೀಕ್ಷೆ ಎದುರಿಸಲು ಸುಲಭವಾಗಲು ಇಲಾಖೆ ಈ ವರ್ಷ ಈ ಪರೀಕ್ಷಾ ವಿಧಾನ ಜಾರಿಗೆ ತಂದಿದೆ ಎಂದು ಹೇಳಿದೆ.
ಪರೀಕ್ಷೆಯನ್ನು ವಿದ್ಯಾರ್ಥಿಗಳ ಆಯಾ ಶಾಲೆಗಳಲ್ಲಿ, ಆಯಾ ತರಗತಿಗಳಲ್ಲಿ ನಡೆಸಲಾಗುತ್ತದೆ. ಅದೇ ಶಾಲೆಯ ಶಿಕ್ಷಕರು ಪರೀಕ್ಷಾರ್ಥಿಗಳಾಗಿರುತ್ತಾರೆ. ಮೌಲ್ಯಮಾಪನ ಕೂಡ ಶಾಲಾ ಮಟ್ಟದಲ್ಲಿಯೇ ಇರುತ್ತದೆ.