ಮಂಗಳೂರು ಗೋಲಿಬಾರ್: ಪೊಲೀಸರ ದೌರ್ಜನ್ಯ ಕುರಿತ ಸಿಡಿ ಬಿಡುಗಡೆಗೊಳಿಸಿದ ಎಚ್‌.ಡಿ.ಕೆ

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಹಲ್ಲೆ, ಗೋಲಿಬಾರ್, ಪ್ರತಿಭಟನಕಾರರ ಕಲ್ಲು ತೂರಾಟ ಕುರಿತು ಮಾಹಿತಿ ಸಂಗ್ರಹಿಸಿರುವ  ವಿಡಿಯೋವನ್ನು ಇಂದು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

Published: 10th January 2020 12:31 PM  |   Last Updated: 10th January 2020 01:31 PM   |  A+A-


HD Kumaraswamy

ಕುಮಾರಸ್ವಾಮಿ

Posted By : Shilpa D
Source : UNI

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಹಲ್ಲೆ, ಗೋಲಿಬಾರ್, ಪ್ರತಿಭಟನಕಾರರ ಕಲ್ಲು ತೂರಾಟ ಕುರಿತು ಮಾಹಿತಿ ಸಂಗ್ರಹಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂದು ಇವುಗಳಿಗೆ ಸಂಬಂಧಿಸಿದ ಮಹತ್ವದ 26 ನಿಮಿಷಗಳ ಸಿಡಿಯನ್ನು ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಇಂದು ಬಿಡುಗಡೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಈ ಸಿಡಿಯಲ್ಲಿನ ವಾಸ್ತವಾಂಶವನ್ನು ಮುಂದಿಟ್ಟುಕೊಂಡು ಚರ್ಚೆಗೆ ಮುಂದಾಗುವುದಾಗಿ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದರು.

ಘೋಷಣೆ ಕೂಗುವವನ ಮೇಲೆ‌ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿಲ್ಲ. ಆದರೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ನಿರಪರಾಧಿ ಜನರ ಮೇಲೆ‌ ಪೊಲೀಸರು ದಾಳಿ ಮಾಡಿ ಅಲ್ಲಿದ್ದ ವ್ಯಕ್ತಿಯನ್ನು ಬಂಧಿಸುತ್ತಾರೆ. ಬಸ್‌ಗಾಗಿ ಕಾಯುತ್ತಿದ್ದ ವ್ಯಕ್ತಿ ಮೇಲೆ ವಿನಾಕಾರಣ‌ ಲಾಠಿ ಪ್ರಹಾರ ಮಾಡಿದ್ದಾರೆ. ಪತ್ರಕರ್ತರನ್ನು ವಿನಾಕಾರಣ ಬಂಧಿಸಿರುವ ದೃಶ್ಯವೂ ಸಿಡಿಯಲ್ಲಿದೆ. ಆತ ಗುರುತಿನ ಚೀಟಿ ತೋರಿಸಿದರೂ ಆತನಿಗೆ ಹಲ್ಲೆ ನಡೆಸಲಾಗುತ್ತದೆ.

ಬೀದಿ ವ್ಯಾಪಾರಿಗಳ ಮೇಲೆ, ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಪೊಲೀಸರ ಬರ್ಬರತೆ, ವಿನಾಕಾರಣ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸುವುದು, ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಕಲ್ಲು ತೂರಾಟ, ವ್ಯಾಪಾರಸ್ಥರಿಗೂ ಧರ್ಮದೇಟು, ಪ್ರತಿಭಟನಕಾರರ ಮೇಲೆ ಅಶ್ರುವಾಯು ಪ್ರಯೋಗ, ಆಯುಕ್ತರಿಂದ ಆದೇಶ ಬರುವ ಮೊದಲೇ ಗೋಲಿಬಾರ್‌ಗೆ ಹುನ್ನಾರ, ನಗರಕ್ಕೆ ಬಂದಿದ್ದ ಅಮಾಯಕರ ಮೇಲೆ‌ ಪೊಲೀಸರು ಮುಗಿಬಿದ್ದು ಭಯಭೀತಿಗೊಳಿಸುವ ಹಾಗೂ ಪೊಲೀಸರ ದೌರ್ಜನ್ಯದಿಂದ ಪ್ರತಿಭಟನಕಾರರು ಟಯರ್‌ಗೆ ಬೆಂಕಿ ಹಾಕಿರುವ, ಪರಿಸ್ಥಿತಿಯನ್ನು, ಹತೋಟಿಗೆ ತರಲು ಕೆಲ ಮುಸ್ಲಿಂ ಯುವಕರು ಪ್ರಯತ್ನಿಸುತ್ತಿರುವುದು ಸೇರಿದಂತೆ ಅಂದಿನ ಘಟನೆಯನ್ನು ವಿವರಿಸುವ ಸಂಪೂರ್ಣ ದೃಶ್ಯಾವಳಿ ಈ ಸಿಡಿಯಲ್ಲಿದೆ.

ಕಮಿಷನರ್‌ ಅನುಮತಿಗೂ ಮೊದಲೇ ಪೊಲೀಸರು ಗೋಲಿಬಾರ್‌ಗೆ ಸಿದ್ಧರಾಗಿ ಗೋಲಿಬಾರ್ ನಡೆಸಿರುವುದು, "ಬಿಡಿ ಸರ್ ಒಂದಾದ್ರೂ ಬೀಳಲಿ, ಗುಂಡು ಗುಪ್ತಾಂಗಕ್ಕೆ ಬೀಳಬೇಕು ಎನ್ನುತ್ತಿರುವ ಪೊಲೀಸರು, " ಕಮಿಷನರ್ ಮಾತಿಗೆ ಹಾಗಾದ್ರೆ ಬೆಲೆ‌ ಇಲ್ಲವೇ ಎಂದು ಪರಸ್ಪರ ಮಾತುಕತೆ ನಡೆಸಿರುವ ಪೊಲೀಸರ ನಡುವಿನ ಚರ್ಚೆಯೂ ಸಿಡಿಯ ದೃಶ್ಯದಲ್ಲಿದೆ.

ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ಹಿರಿಯ ನ್ಯಾಯವಾದಿ ವೆಂಕಟೇಶ್, ಹಿರಿಯ ಪತ್ರಕರ್ತ ಸುಗತಶ್ರೀನಿವಾಸ್ ಈ ಮೂವರ ನೇತೃತ್ವದಲ್ಲಿ ಮಂಗಳೂರು ಘಟನೆಯ ಬಗ್ಗೆ ಮಾಹಿತಿ ಪಡೆಯಲು ಸಮಿತಿ ರಚಿಸಲಾಗಿತ್ತು.

ಡಿ‌. 19ರಂದು ನಡೆದ ದುರ್ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದೇನೆ. ಪೊಲೀಸರು ಅಧಿಕಾರಿಗಳು ಮಾಡಿದ ತಪ್ಪು ಸರ್ಕಾರದ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಒಬ್ಬ ಸರ್ಕಲ್‌ ಇನ್ಸ್‌ಪೆಕ್ಟರ್ ಪತ್ರಿಕಾಗೋಷ್ಠಿ ನಡೆಸದಂತೆ ನಮ್ಮ ಸಮಿತಿಗೆ ನೊಟೀಸ್ ಕೊಟ್ಟಿದ್ದಾರೆ. ಹಕ್ಕನ್ನು ಮೊಟಕುಗೊಳಿಸುವ ಅಧಿಕಾರವನ್ನು ಇವರಿಗೆ ನೀಡಿದವರು ಯಾರು? ಎಂದು ಸಮಿತಿಯವರು ಪ್ರಶ್ನಿಸಿದ್ದಾರೆ.

ಪೊಲೀಸ್ ಕಮಿಷನರ್‌ ಹರ್ಷಾ ಅವರ ನಡವಳಿಕೆಯೇ ಅನುಮಾನಾಸ್ಪದವಾಗಿದೆ. ಜವಾಬ್ದಾರಿಯುತ ಸರ್ಕಾರ ರಾಜ್ಯದಲ್ಲಿರುವುದೇ ಆದರೆ ಹರ್ಷಾ ಅವರನ್ನು ಮೊದಲು ಅಮಾನತುಗೊಳಿಸಬೇಕಿತ್ತು. ಘಟನೆಯ ಬಗ್ಗೆ ಸರ್ಕಾರ ಆದೇಶಿಸಿರುವ ಸರ್ಕಾರದ ನ್ಯಾಯಾಂಗ ತನಿಖೆ ಹಳ್ಳಹಿಡಿದಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಮಂಗಳೂರು ಘಟನೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ಪೊಲೀಸರ ದೌರ್ಜನ್ಯವನ್ನು ಸಾರ್ಜನಿಕರ ಮುಂದಿಟ್ಟ ಎಚ್‌.ಡಿ.ಕುಮಾರಸ್ವಾಮಿಯವರ ನಡೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Stay up to date on all the latest ರಾಜ್ಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp