ಮೈಸೂರು: ದಲಿತ ಕುಟುಂಬದ ಇಬ್ಬರು ಸಹೋದರರು ಮೈಸೂರಿನ ಕೆಲವು ಗ್ರಾಮಗಳಲ್ಲಿ ಸಾಮಾಜಿಕ ಸಾಮರಸ್ಯದ ರಾಯಭಾರಿಗಳಾಗಿದ್ದಾರೆ. ಈ ಮೂಲಕ ಸಹೋದರರಿಬ್ಬರು ಸಾಮಾಜಿಕ ಉದ್ವಿಗ್ನತೆಯನ್ನು ಕೊನೆಗೊಳಿಸಿದ್ದಾರೆ ಮತ್ತು ಕಪ್ಪಸೋಗೆ ಮತ್ತು ನೆರೆಯ ಹಳ್ಳಿಗಳಲ್ಲಿ ತಮ್ಮ ಸಮುದಾಯದ ಸದಸ್ಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಹಳ್ಳಿಗಳಲ್ಲಿ ಕ್ಷೌರಿಕನ ಅಂಗಡಿಗಳಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರಿಂದ ಜನರ ಕಷ್ಟ ಅರಿತ ಕೆ.ಪಿ.ಮಹದೇವ ಮತ್ತು ಅವರ ಸಹೋದರ ಕೆ.ಪಿ.ಸಿದ್ದರಾಜು ಅವರು ಕಪ್ಪಸೋಗೆ, ಕುರುಹುಂಡಿ, ಗೌಡರಹುಂಡಿ ಮತ್ತು ಮಾಡನಹಳ್ಳಿಯ ತಮ್ಮ ಸಮುದಾಯದವರ ಮನೆಗೆ ತೆರಳಿ ಹೇರ್ ಕಟಿಂಗ್ ಮಾಡಲು ಆರಂಭಿಸಿದ್ದಾರೆ.
ಹಲವು ಬಾರಿ, ಎಲ್ಲಾ ವಯಸ್ಸಿನ ದಲಿತರಿಗೂ ತಮ್ಮ ಹಳ್ಳಿಯ ಕ್ಷೌರಿಕನ ಅಂಗಡಿಗಳಲ್ಲಿ ಕಟಿಂಗ್ ಮಾಡಲು ನಿರಾಕರಿಸಿದ್ದ ಅವರು ಕ್ಷೌರಕ್ಕಾಗಿ ಉಲ್ಲಹಳ್ಳಿ ಅಥವಾ ನಂಜನಗೂಡು ಪಟ್ಟಣಕ್ಕೆ ಭೇಟಿ ಹೋಗಬೇಕಾಗಿತ್ತು. ಅಲ್ಲಿಗೆ ಹೋಗಲು ಪ್ರಯಾಣಕ್ಕಾಗಿ ಹೆಚ್ಚುವರಿ ಹಣ ಖರ್ಚು ಮಾಡುವುದರ ಜೊತೆಗೆ, ಅವರು ಒಂದು ದಿನ ಕೆಲಸದಿಂದ ಸಹ ದೂರ ಉಳಿಯಬೇಕಾಗಿತ್ತು.
ಹಣ ಸಂಪಾದಿಸುವುದಕ್ಕಿಂತ ನಮ್ಮ ಸಮುದಾಯದ ಜನರ ಸೇವೆ ಮಾಡುವುದು ನಮಗೆ ಮುಖ್ಯ. ಈಗ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ನಮಗಾಗಿ ಕಾಯುತ್ತಾರೆ ಎಂದು ಮಹಾದೇವ ಹೇಳಿದ್ದಾರೆ.
ಈ ದಲಿತ ಸಹೋದರರು ಎಂಟು ವರ್ಷಗಳಿಂದ ಈ ವೃತ್ತಿಯಲ್ಲಿದ್ದಾರೆ ಮತ್ತು ಸರ್ಕಾರ ಅವರಿಗೆ ಹಣಕಾಸಿನ ನೆರವು ನೀಡಿದರೆ ಸಾಮರಸ್ಯದ ಸಲೂನ್ ತೆರೆಯುವ ಯೋಜನೆಯನ್ನು ಹೊಂದಿದ್ದಾರೆ. ಸಾಮಾಜಿಕ ಉದ್ವಿಗ್ನತೆಯನ್ನು ಕೊನೆಗೊಳಿಸಲು ಮತ್ತು ಜನರಲ್ಲಿ ಸಾಮರಸ್ಯ ಮತ್ತು ಸಹೋದರತ್ವವನ್ನು ಬಲಪಡಿಸುವ ಉದ್ದೇಶದಿಂದ ಹಳ್ಳಿಗಳಲ್ಲಿ ವಿಶೇಷವಾಗಿ ದಲಿತರ ಕಾಲೋನಿಯಲ್ಲಿ ಸಲೂನ್ ತೆರೆಯಲು ಬಯಸಿದ್ದೇವೆ ಎಂದು ಮಹಾದೇವ ತಿಳಿಸಿದ್ದಾರೆ.
Advertisement