ಹುಮ್ನಾಬಾದ್ (ಬೀದರ್): ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ಎಷ್ಟೇ ಮನವಿ ಮಾಡಿಕೊಂಡು ಕಠಿಣ ಕ್ರಮ ಕೈಗೊಂಡರೂ ಕೂಡ ನೌಕರರು ಮಾತ್ರ ಕ್ಯಾರೇ ಮಾಡುತ್ತಿಲ್ಲ.
ಈ ಬಗ್ಗೆ ಇಂದು ಬೀದರ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಾರಿಗೆ ಇಲಾಖೆ ಸಚಿವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಇಲಾಖೆ ನೌಕರರಿಗೆ ಜನಸಾಮಾನ್ಯರ ಕಷ್ಟವೇಕೆ ಅರ್ಥವಾಗುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಮುಖ್ಯಮಂತ್ರಿಗಳು, ನಾನು ಎಷ್ಟು ಬಾರಿ ವಿನಂತಿ ಮಾಡಿಕೊಂಡರೂ ಕೇಳುತ್ತಿಲ್ಲ, ಈಗ ಸಾರ್ವಜನಿಕರು ಕೂಡ ತಮಗೆ ಕಷ್ಟವಾಗುತ್ತಿಲ್ಲ, ಮುಷ್ಕರ ಹಿಂತೆಗೆದುಕೊಳ್ಳಿ ಎಂದು ಕೇಳುತ್ತಿದ್ದಾರೆ, ಕೊರೋನಾ ಸಂಕಷ್ಟ ಕಾಲದಲ್ಲಿ ಈ ರೀತಿ ಮಾಡಿದರೆ ಬಡ, ಕೆಳ ಮಧ್ಯಮ ವರ್ಗದ ಜನರಿಗೆ ಕಷ್ಟವಾಗುತ್ತದೆ ಎಂದರು.
59 ಬಸ್ಸುಗಳಿಗೆ ಹಾನಿ: ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಮೇಲೆ ಹಲ್ಲೆ, ಬಸ್ಸುಗಳಿಗೆ ಹಲ್ಲೆ ಮಾಡಲಾಗುತ್ತಿದೆ, ಕೋಟ್ಯಂತರ ರೂಪಾಯಿ ಹಾನಿ ಮಾಡಲಾಗುತ್ತಿದೆ, ನಿನ್ನೆ 59 ಬಸ್ಸುಗಳಿಗೆ ಹಾನಿ ಮಾಡಲಾಗಿದೆ. 170 ಕೋಟಿಗಿಂತಲೂ ಅಧಿಕ ಇಲಾಖೆಗೆ ನಷ್ಟವಾಗಿದೆ. ನಿನ್ನೆ ಮುಖ್ಯಮಂತ್ರಿಗಳು, ಸಾರ್ವಜನಿಕ ಕೆಲಸಕ್ಕೆ ಹಾಜರಾದವರಿಗೆ ಅಡ್ಡಿಪಡಿಸುವುದು, ಹಲ್ಲೆ ಮಾಡುವುದು,ಹಾನಿ ಮಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ಇವತ್ತು ಹಲವು ಕಡೆಗಳಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಳಗ್ಗೆಯೇ ಸಾವಿರಾರು ಬಸ್ಸುಗಳು ಸಂಚರಿಸುತ್ತಿದ್ದು ನಾಳೆಯ ಹೊತ್ತಿಗೆ 5 ಸಾವಿರ ಬಸ್ಸುಗಳು ಸಂಚಾರ ನಡೆಸಬಹುದು ಎಂಬ ನಿರೀಕ್ಷೆಯಿದೆ. ಸರ್ಕಾರಿ ವಾಹನಗಳು ಹೊರಡುತ್ತಿದ್ದ ಸಮಯಕ್ಕೆ ಖಾಸಗಿ ವಾಹನಗಳನ್ನು ಕಳುಹಿಸಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲಿ ಖಾಸಗಿ ವಾಹನಗಳು ದರ ನಿಗದಿಪಡಿಸಿ ಸುಮಾರು 24 ಸಾವಿರ ಬಸ್ಸುಗಳು ಸಂಚರಿಸುತ್ತಿವೆ ಎಂದರು.
ಖಾಸಗೀಕರಣ ಪ್ರಸ್ತಾಪವಿಲ್ಲ: ಖಾಸಗಿಯವರಿಗೆ ಹೆಚ್ಚು ಬಸ್ಸುಗಳನ್ನು ಓಡಾಡಿಸಲು ಸಮಯವನ್ನು ನೀಡಬೇಕೆಂದಿಲ್ಲ, ಸರ್ಕಾರದ ಇಲಾಖೆಯಲ್ಲಿ 25 ಸಾವಿರ ಬಸ್ಸುಗಳಿದ್ದು 1 ಲಕ್ಷ 30 ಸಾವಿರ ಮಂದಿ ಸಿಬ್ಬಂದಿಯಿದ್ದಾರೆ. ನಾವು ಇಲಾಖೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋದರೆ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ, ಖಾಸಗಿಯವರಿಗೆ ನೀಡಿದರೆ ದರ ಹೆಚ್ಚಳವಾಗಬಹುದು ಎಂದ ಸಚಿವ ಲಕ್ಷ್ಮಣ ಸವದಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ಉದಾಹರಣೆ ಕೊಟ್ಟರು.
ತೆಲಂಗಾಣ ಮಾದರಿಯಲ್ಲಿ ಮುಷ್ಕರ ಮಾಡಿದರೆ ಅಲ್ಲಿನ ಸಿಬ್ಬಂದಿಗಾದ ಪರಿಸ್ಥಿತಿಯೇ ಕರ್ನಾಟಕದಲ್ಲಿ ಕೂಡ ಆಗುತ್ತದೆ,ಅಲ್ಲಿ 40 ದಿವಸ ಸಂಪೂರ್ಣ ಸಾರಿಗೆ ಬಸ್ಸುಗಳ ಓಡಾಟ ಸ್ತಬ್ಧವಾಗಿ, ಎಸ್ಮಾ ಜಾರಿಯಾಗಿತ್ತು, ಈ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಯೋಚನೆ ಮಾಡಬೇಕು ಎಂದರು.
ಎಸ್ಮಾ ಜಾರಿ ಬಗ್ಗೆ ಚಿಂತನೆ ಮಾಡಿಲ್ಲ: ಸಾರಿಗೆ ಇಲಾಖೆ ನೌಕರರ ಮುಷ್ಕರಕ್ಕೆ ಎಸ್ಮಾ ಜಾರಿ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ. ಏಕೆಂದರೆ ಇಲ್ಲಿ ಪರಿಸ್ಥಿತಿ ಸುಧಾರಿಸುತ್ತಿಲ್ಲ, ಪ್ರತಿದಿನ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ನನ್ನ ಅಥಣಿ ಕ್ಷೇತ್ರದಲ್ಲಿ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.
ಸರ್ಕಾರ ಇನ್ನೂ ಸಾರಿಗೆ ಇಲಾಖೆ ನೌಕರರ ಬಗ್ಗೆ ಮೃದು ಧೋರಣೆಯನ್ನೇ ಹೊಂದಿದೆ. ನಮ್ಮ ಸಿಬ್ಬಂದಿಗಳು ಎಂಬ ಭಾವನೆಯಲ್ಲಿಯೇ ಇದ್ದೇವೆ. ಕೊರೋನಾ ಎರಡನೇ ಅಲೆ ಬಹಳ ದೊಡ್ಡ ಮಟ್ಟದಲ್ಲಿದೆ, ಇನ್ನೊಂದೆಡೆ ಮುಷ್ಕರ ಮಾಡಿದರೆ ಜನರ ಆಕ್ರೋಶಕ್ಕೆ ನಾವೆಲ್ಲರೂ ತುತ್ತಾಗಬೇಕಿದೆ. ಕೆಲಸಕ್ಕೆ ಹಾಜರಾಗಿ, ಮೇ 4ರ ನಂತರ ಸಂಬಳ ಹೆಚ್ಚಿಸಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಸರ್ಕಾರ ಬರುತ್ತದೆ ಎಂದು ಸಚಿವ ಲಕ್ಷ್ಮಣ ಸವದಿ ಆಶ್ವಾಸನೆ ನೀಡಿದರು.
ಸಾರಿಗೆ ಇಲಾಖೆ ಮಹಿಳಾ ನೌಕರರನ್ನು, ಮಕ್ಕಳನ್ನು ಕಳುಹಿಸಿ ಮುಷ್ಕರದ ಭಾಗವಾಗಿ ಭಿಕ್ಷಾಟನೆಗೆ ಕಳುಹಿಸುವುದು ಅವಮಾನಕಾರಿ, ಖಂಡನೀಯ ಎಂದರು.
Advertisement