ಜನರಲ್ಲಿ ಭಯ ಹೋಗಲಾಡಿಸುವ ಜವಾಬ್ದಾರಿ ವೈದ್ಯರದ್ದು: ಸಂಸದ ಉಮೇಶ್ ಜಾಧವ್

ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು, ಅವರಲ್ಲಿ ಭಯ ಹೋಗಲಾಡಿಸಿ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರದ್ದಾಗಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದ್ದಾರೆ.
ಉಮೇಶ್ ಜಾಧವ್
ಉಮೇಶ್ ಜಾಧವ್
Updated on

ಕಲಬುರಗಿ: ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು, ಅವರಲ್ಲಿ ಭಯ ಹೋಗಲಾಡಿಸಿ ಸೂಕ್ತ ಮಾರ್ಗದರ್ಶನದ ಮೂಲಕ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರದ್ದಾಗಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಕರೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಸ್ಪತ್ರೆಗೆ ದಾಖಲಾದರೆ ಹಾಗೂ ರೆಮಿಡಿಸ್ವಿರ್ ಇಂಜೆಕ್ಷನ್
ತೆಗೆದುಕೊಂಡರೇ ಕೋವಿಡ್ ಸೋಂಕಿನಿಂದ ವಾಸಿಯಾಗಬಹುದು ಎಂದು ಜನರು ಭಾವಿಸಿದ್ದು, ಇದು ಸಾರ್ವಜನಿಕರ ಮನಸ್ಸಿನಲ್ಲಿ ಬೇರೂರಿದೆ. ಸಾರ್ವಜನಿಕರ ಮನಸ್ಸಿನಿಂದ ಇದನ್ನು ನಾವು ಹೋಗಲಾಡಿಸಬೇಕಾಗಿದ್ದು, ಇದಕ್ಕಾಗಿ ತಜ್ಞ ವೈದ್ಯರ ಸಮಿತಿ ರಚಿಸಬೇಕು. ಸಮಿತಿಯ ಶಿಫಾರಸ್ಸಿನ ಅನ್ವಯ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಸೌಮ್ಯ ಸ್ವಭಾವದ ಸೋಂಕಿತರಿಗೆ ಆಸ್ಪತ್ರೆಯ ಚಿಕಿತ್ಸೆ ಅವಶ್ಯಕತೆ ಇಲ್ಲ ಎಂಬುದನ್ನು ಸಹ ಜನರಿಗೆ ಮನವರಿಕೆ ಮಾಡಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಮಾತ್ರ ಜಿಮ್ಸ್ ಹಾಗೂ ಇ.ಎಸ್.ಐ.ಸಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಿಗೆ ಬೇಕಾದ ಔಷಧಿ, ಆಕ್ಸಿಜನ್ ಸಿಲೆಂಡರ್, ಹಾಸಿಗೆ ಪೂರೈಕೆಗೆ ಯಾವುದೇ ಕೊರತೆ ಇಲ್ಲ, ಹೆಚ್ಚುವರಿ ಕೇಳಿದಲ್ಲಿ ಸರ್ಕಾರದಿಂದ ಪೂರೈಸಲಾಗುವುದು. ಎಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಲ್ಪ್ ಡೆಸ್ಕ್ ರಚಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಜಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆಯಿದೆ ಎಂದು ಜಿಮ್ಸ್ ಸಂಸ್ಥೆಯ ನಿರ್ದೇಶಕಿ ಡಾ. ಕವಿತಾ ಪಾಟೀಲ ಅವರು ಸಂಸದರಿಗೆ ತಿಳಿಸಿದರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಸಂಸದರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅನಿಲಕುಮಾರ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಜಿಮ್ಸ್ ಅಗತ್ಯವಿರುವ 10 ಲ್ಯಾಬ್ ಟೆಕ್ನಿಷಿಯನ್, 20 ಡಾಟಾ ಎಂಟ್ರಿ ಅಪರೇಟರ್, 10 ಜನ ವೈದ್ಯರು, 40 ಜನ ಗ್ರೂಪ್ ‘ಡಿ’ ಸಿಬ್ಬಂದಿಗಳು ಹಾಗೂ 100 ಜನ ನರ್ಸ್ ಸಿಬ್ಬಂದಿಗಳನ್ನು ತುರ್ತಾಗಿ ಪೂರೈಸುವಂತೆ ಕೋರಿಕೊಂಡರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಪ್ರತಿನಿಧಿಗಳ ಸಹಕಾರ ಪಡೆದು ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು ಗ್ರಾಮ ಪಂಚಾಯತಿ ಮತ್ತು ಆರೋಗ್ಯ ಇಲಾಖೆಯಿಂದ ಜನರಲ್ಲಿ ವ್ಯಾಕ್ಸಿನ್ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು
ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀಪ್ ಶಶಿ ಅವರಿಗೆ ನಿರ್ದೇಶನ ನೀಡಿದ ಸಂಸದರು, ಮಾಸ್ಕ್ ಬಳಸದೆ ಓಡಾಡುವರ ಹಾಗೂ ರಾತ್ರಿ ಕರ್ಫ್ಯೂನಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ ಅವರಿಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com