ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ರಷ್ಟು ಹಾಸಿಗೆ ಸ್ವಾಧೀನಕ್ಕೆ ಜಂಟಿ ಕಾರ್ಯಾಚರಣೆ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ಮಾಡುವಂತೆ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುವುದರ ಜೊತೆಗೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ಕೊರತೆಯೂ ತೀವ್ರವಾಗುತ್ತಿದ್ದು, ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಬಸವರಾಜ ಬೊಮ್ಮಾಯಿ,ಬೆಂಗಳೂರು ನಗರವನ್ನು 8 ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಒಂದೊಂದು ವಲಯಕ್ಕೆ ಒಬ್ಬ ಉಪ ಪೊಲೀಸ್ ಆಯುಕ್ತ ಹಾಗೂ ಬಿಬಿಎಂಪಿ ಜಂಟಿ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮುಂದಿನ ಮೂರು ನಾಲ್ಕು ದಿನಗಳಲ್ಲಿ ತಮ್ಮ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಿಗೆ ದಿಡೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ವಾಸ್ತವ ಸ್ಥಿತಿ ತಿಳಿದುಕೊಳ್ಳಬೇಕು. ಅಲ್ಲಿ ಖಾಲಿ ಇರುವ ಬೆಡ್ ಗಳ ಬಗ್ಗೆ ಮಾಹಿತಿ ಪಡೆಯಬೇಕು. ಪ್ರತಿಯೊಂದು ಆಸ್ಪತ್ರೆ ಸರ್ಕಾರಕ್ಕೆ ಶೇಕಡ 50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡುವಂತೆ ನೋಡಿಕೊಳ್ಳಬೇಕು. ಇದುವರೆಗೆ ಖಾಸಗಿ ಆಸ್ಪತ್ರೆಗಳು 7000 ಬೆಡ್ ಗಳನ್ನು ಸರ್ಕಾರಕ್ಕೆ ನೀಡಿವೆ. ಆದರೆ ಇನ್ನೂ 4000 ಹಾಸಿಗೆ ಗಳನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಬೇಕಾಗಿದೆ. ಅದರಲ್ಲಿಯೂ ಆಕ್ಸಿಜನ್ ಇರುವ ಹಾಸಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜಂಟಿ ಕಾರ್ಯಾಚರಣೆ ಮೂಲಕ ಆಕ್ಸಿಜನ್ ಇರುವ ಬೇಡಗಳನ್ನು ಪಡೆದುಕೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಬೊಮ್ಮಾಯಿ ತಾಕೀತು ಮಾಡಿದರು.

ಕಳೆದ ಬಾರಿಯ ಲಾಕ್ಡೌನ್ ಸಂದರ್ಭದಲ್ಲಿ ಕೈಗೊಳ್ಳಲಾಗಿದ್ದ ಬಿಗಿ ಕ್ರಮಗಳನ್ನು ನಾಳೆ ರಾತ್ರಿಯಿಂದ ಆರಂಭವಾಗಲಿರುವ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿಯೂ ಜಾರಿಗೊಳಿಸಿ. ಮುಖ್ಯ ಮತ್ತು ಸಣ್ಣ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಅಳವಡಿಸಿ. ವಾಹನ ಸಂಚಾರ ನಿರ್ಬಂಧಿಸಿ. ಅನವಶ್ಯಕವಾಗಿ ಬೆಂಗಳೂರಿಗೆ ಬರುವವರನ್ನು ನಿರ್ಬಂಧಿಸಿ. ವಿನಾಕಾರಣ ತಿರುಗಾಡಲು ಜನರಿಗೆ ಅವಕಾಶ ನೀಡಬೇಡಿ. ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ವಿನಾಕಾರಣ ಓಡಾಡುವ ಜನ ಬಳಸುವ ವಾಹನಗಳನ್ನು ಸೀಜ್ ಮಾಡಿ. ಒಳ್ಳೆ ಮಾತಿನಲ್ಲಿ ಕೇಳದಿದ್ದರೆ ಕಠಿಣ ಕ್ರಮ ಜರುಗಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಾರಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಮದುವೆ ಸಮಾರಂಭ ನಡೆಯುತ್ತಿವೆ. ಕಲ್ಯಾಣ ಮಂಟಪ ಹಾಗೂ ಸಭಾ ಮಂದಿರಗಳ ಮಾಲೀಕರಿಂದ ಕಾನೂನು ಉಲ್ಲಂಘನೆ ಆಗದಿರುವ ಕುರಿತು ಮುಚ್ಚಳಿಕೆಯನ್ನು ಪಡೆಯಿರಿ. ಕಾನೂನು ಉಲ್ಲಂಘನೆ ಮಾಡುವ ಚೌಟ್ರಿ ಹಾಗೂ ಕಲ್ಯಾಣ ಮಂಟಪಗಳನ್ನು ಮುಲಾಜಿಲ್ಲದೆ ಬಂದ್ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಚಿವ ಬೊಮ್ಮಾಯಿ ಕಟ್ಟುನಿಟ್ಟಿನ ಅಪ್ಪಣೆ ಮಾಡಿದರು.

ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com