ಮುರುಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ ಗ್ರೇ ಆ್ಯಂಬರ್: ಅರಣ್ಯ ಇಲಾಖೆಗೆ ಹಸ್ತಾಂತರ, ಅಧ್ಯಯನಶೀಲರಲ್ಲಿ ಕುತೂಹಲ 

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ ಗಟ್ಟಿಯಾದ ವಸ್ತುವಿನ ತುಂಡು ಸಮುದ್ರ ಜೀವಶಾಸ್ತ್ರ ತಜ್ಞರನ್ನು ಚಕಿತಗೊಳಿಸಿದೆ.
ಮುರುಡೇಶ್ವರದಲ್ಲಿ ಸಿಕ್ಕಿದ ಆ್ಯಂಬರ್
ಮುರುಡೇಶ್ವರದಲ್ಲಿ ಸಿಕ್ಕಿದ ಆ್ಯಂಬರ್
Updated on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ ಗಟ್ಟಿಯಾದ ವಸ್ತುವಿನ ತುಂಡು ಸಮುದ್ರ ಜೀವಶಾಸ್ತ್ರ ತಜ್ಞರನ್ನು ಚಕಿತಗೊಳಿಸಿದೆ.

ಈ ವಸ್ತುವನ್ನು ಬೂದು ಬಣ್ಣದ ಶಿಲಾರಾಳ ಪಳೆಯುಳಿಕೆ, ಗ್ರೇ ಆ್ಯಂಬರ್ (Grey Amber) ಎಂದು ಹೇಳಲಾಗುತ್ತಿದ್ದು, ವೀರ್ಯ ತಿಮಿಂಗಿಲ ವಾಂತಿ ಮಾಡಿದ ವಸ್ತು ಎಂದು ಭಾವಿಸಲಾಗಿದೆ. ಕರಾವಳಿ ತೀರದಲ್ಲಿ ಕಂಡುಬಂದಿರುವ ಈ ವಸ್ತು ಸಂಶೋಧನೆಗೆ ಎಡೆಮಾಡಿಕೊಟ್ಟಿದೆ.

ನಿನ್ನೆ ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರರೊಬ್ಬರಿಗೆ ತೀವ್ರ ವಾಸನೆ ಬಂದು ಹೋಗಿ ನೋಡಿದಾಗ ಈ ವಸ್ತು ಸಿಕ್ಕಿತು. ಇದೊಂದು ಅಪರೂಪದ ವಸ್ತುವೆಂದು ಅವರಿಗೆ ಅನ್ನಿಸಿ ತೆಗೆದುಕೊಂಡು ಹೋಗಿ ಸಮುದ್ರ ಜೀವಿಶಾಸ್ತ್ರ ವಿಭಾಗದ ತಜ್ಞರಿಗೆ ತೋರಿಸಿದರು. ಅವರು ಅದನ್ನು ವೀರ್ಯ ತಿಮಿಂಗಿಲ ಮಾಡಿದ ವಾಂತಿ ಗ್ರೇ ಆ್ಯಂಬರ್ ಪಳೆಯುಳಿಕೆ ಎಂದು ಗುರುತಿಸಿದರು. ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಕಾರವಾರದ ಸಮುದ್ರ ಜೀವಿಶಾಸ್ತ್ರಜ್ಞರು ಮೀನುಗಾರನಿಗೆ ಸೂಚಿಸಿದರು.

ಮುರುಡೇಶ್ವರ ಸಮುದ್ರ ತೀರದಲ್ಲಿ ಸಿಕ್ಕಿದ ಪಳೆಯುಳಿಕೆ ಈಗ ನಮ್ಮ ಬಳಿ ಇದೆ. ಮೀನುಗಾರರಿಗೆ ಈ ರೀತಿ ತೀರದಲ್ಲಿ ವಿಶೇಷವಾದದ್ದು ಏನಾದರೂ ಸಿಕ್ಕಿದರೆ ನಮಗೆ ತಂದು ಕೊಡುತ್ತಾರೆ ಎಂದು ಮಂಕೆಯ ವಲಯ ಅರಣ್ಯಾಧಿಕಾರಿ ರಂಗನಾಥ್ ಹೇಳುತ್ತಾರೆ.

ಅಂಬರ್ಗ್ರಿಸ್ ಅಥವಾ ಬೂದು ಬಣ್ಣದ ಆ್ಯಂಬರ್ ಅಪರೂಪದ್ದಾಗಿದ್ದು, ಕರಾವಳಿಯಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ವೀರ್ಯ ತಿಮಿಂಗಿಲವನ್ನು ರಾಜ್ಯದ ಕರಾವಳಿಯಲ್ಲಿ ಅಪರೂಪದ ದೃಶ್ಯವೆಂದು ಪರಿಗಣಿಸಲಾಗಿದೆ. ಇದನ್ನು ಕೊನೆಯ ಬಾರಿಗೆ ನೋಡಿದ್ದು 2010ರಲ್ಲಿ ದೇವ್‌ಬಾಗ್ ಬಳಿ. ಅಂಬರ್ಗ್ರಿಸ್ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಬಾಳುತ್ತದೆ. ಸುಗಂಧ ದ್ರವ್ಯ ಉದ್ಯಮದಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಸಮುದ್ರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ್ ಹರಗಿ ಹೇಳುತ್ತಾರೆ.

ವೀರ್ಯ ತಿಮಿಂಗಿಲದ ಪಿತ್ತರಸ ನಾಳದ ಸ್ರವಿಸುವಿಕೆಯಿಂದ ಆ್ಯಂಬಗ್ರಿಸ್ ರೂಪುಗೊಳ್ಳುತ್ತದೆ. ಇದು ಸಾಮಾನ್ಯವಾಗಿ ದೈತ್ಯ ಸ್ಕ್ವಿಡ್‌ಗಳು ಅಥವಾ ಕಟಲ್‌ಫಿಶ್‌ನ ತ್ಯಾಜ್ಯವಾಗಿರುತ್ತದೆ. ತಿಮಿಂಗಿಲವು ಅದನ್ನು ವಾಂತಿ ಅಥವಾ ಮಲ ವಸ್ತುವಾಗಿ ಕಳುಹಿಸುತ್ತದೆ, ಸಾಮಾನ್ಯವಾಗಿ ಇದು ಸಮುದ್ರದಲ್ಲಿ ತೇಲುತ್ತಿರುವಂತೆ ಕಂಡುಬರುತ್ತದೆ ಎಂದು ಪ್ರೊ.ಶಿವಕುಮಾರ್ ಹೇಳುತ್ತಾರೆ.

ಆ್ಯಂಬಗ್ರಿಸ್ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಪಾನ್, ಆಸ್ಟ್ರೇಲಿಯಾ ಮತ್ತು ಮೊಲುಕನ್ ದ್ವೀಪಗಳಲ್ಲಿ ಕಂಡುಬರುತ್ತದೆ. ಹಲವಾರು ವರ್ಷಗಳ ನಂತರ ತೂಕದಲ್ಲಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ. ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ಕಂಡುಬರುವ ಅಂಬರ್ಗ್ರಿಸ್ ತೂಕದಲ್ಲಿ 15 ಗ್ರಾಂ ಮತ್ತು 50 ಕಿ.ಗ್ರಾಂವರೆಗೆ ಇರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com