ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿಯಿಂದ ಮಾಲಾರ್ಪಣೆ
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿಯಿಂದ ಮಾಲಾರ್ಪಣೆ

ಸರ್ಕಾರದಿಂದ ಆ.15ರಂದು ಸಂಗೊಳ್ಳಿ ರಾಯಣ್ಣ ಜನ್ಮದಿನ ಕಾರ್ಯಕ್ರಮ: ಸಿಎಂ ಬೊಮ್ಮಾಯಿ ಚಾಲನೆ

ಸಿಪಾಯಿ ದಂಗೆಯ 40 ವರ್ಷ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಧೀರ, ದಿಟ್ಟ ಮಹಿಳೆ ರಾಣಿ ಚೆನ್ನಮ್ಮ. ನಮ್ಮೆಲ್ಲರ ಅಭಿಮಾನ, ಸ್ವಾಭಿಮಾನದ ಸಂಕೇತ ಅವರು. ಅವರ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ನಿಂತುಕೊಂಡಿದ್ದು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವಿಚಾರ.

ಬೆಂಗಳೂರು: ಸಿಪಾಯಿ ದಂಗೆಯ 40 ವರ್ಷ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಧೀರ, ದಿಟ್ಟ ಮಹಿಳೆ ರಾಣಿ ಚೆನ್ನಮ್ಮ. ನಮ್ಮೆಲ್ಲರ ಅಭಿಮಾನ, ಸ್ವಾಭಿಮಾನದ ಸಂಕೇತ ಅವರು. ಅವರ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ನಿಂತುಕೊಂಡಿದ್ದು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವಿಚಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೊಂಡಾಡಿದ್ದಾರೆ. 

ರಾಜ್ಯ ಸರ್ಕಾರ ಸಂಗೊಳ್ಳಿ ರಾಯಣ್ಣ ಅವರ 224ನೇ ಜಯಂತ್ಯೋತ್ಸವ ಆಚರಿಸಿತು. ಬೆಂಗಳೂರಿನ ಖೋಡೆ ಸರ್ಕಲ್​ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಸರ್ವ ಸಿಂಗಾರ ಮಾಡಲಾಗಿತ್ತು. ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನ ಇಂದು ಆಗಸ್ಟ್ 15ರಂದು. ಅವರ ತ್ಯಾಗ, ಬಲಿದಾನದ ದಿನ ಜನವರಿ 26. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರ ತ್ಯಾಗ, ಬಲಿದಾನಗಳನ್ನು ಸಹ ಸ್ಮರಿಸಿಕೊಳ್ಳಲು ನಮ್ಮ ಸರ್ಕಾರ ಎರಡು ದಿನ ಹಿಂದೆ ಆದೇಶ ಹೊರಡಿಸಿದಂತೆ ಇಂದಿನಿಂದ ಪ್ರತಿವರ್ಷ ಆಗಸ್ಟ್ 15ರಂದು ಸಂಗೊಳ್ಳಿ ರಾಯಣ್ಣ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತೇವೆ, ಇಂದು ಅಧಿಕೃತವಾಗಿ ಚಾಲನೆ ನೀಡಿದ್ದೇವೆ ಎಂದರು. 

ಸ್ವಾತಂತ್ರ್ಯ ಹೋರಾಟಕ್ಕೆ ಮೈಲಾರ ಮಹದೇವಣ್ಣ, ಸಾಹುಕಾರ ಚೆನ್ನಯ್ಯ, ರಾಣಿ ಅಬ್ಬಕ್ಕ, ಸ್ವಾಮಿ ರಮಾನಂದ್ ಇವರ ಸೇವೆ ಅಮೋಘವಾಗಿದೆ ಎಂದು ಸ್ಮರಿಸಿಕೊಂಡರು. 

ಸರ್ಕಾರ ಸಂಗೊಳ್ಳಿ ರಾಯಣ್ಣ ಮತ್ತು ಕನ್ನಡ ನಾಡಿನ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಘೋಷಿಸಿದ್ದ 80 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ನಿರ್ಮಾಣ ಮಾಡಿ ದೇಶ ಕಾಯುವ ಸೈನಿಕರನ್ನು ಸೃಷ್ಟಿಸುವ ಕಾರ್ಯವನ್ನು ಮಾಡಲು ಮುಂದಾಗಿದ್ದೇವೆ ಎಂದು ಸಿಎಂ ಘೋಷಿಸಿದರು.

ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯವನ್ನು ಬೆಂಗಳೂರು, ಜಿಲ್ಲಾ ಕೇಂದ್ರಗಳು ಮಾತ್ರವಲ್ಲದೆ ತಾಲ್ಲೂಕು ಕೇಂದ್ರಗಳಿಗೆ ಸಹ ವಿಸ್ತರಿಸಬೇಕೆಂದು, ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಲು ಯತ್ನಿಸಲಾಗುವುದು ಎಂದು ಪ್ರಕಟಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಬಂದಿದ್ದು, ಅದನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಾತನಾಡಿ ಅದರ ಅನುಮೋದನೆಗೆ ಹಿರಿಯ ಅಧಿಕಾರಿಗಳೊಂದಿಗೆ ಕೂಡ ಮಾತುಕತೆ ನಡೆಸಿ ಕ್ರಮ ಜರುಗಿಸುತ್ತೇನೆ  ಎಂದು ಭರವಸೆ ನೀಡಿದರು. 

Related Stories

No stories found.

Advertisement

X
Kannada Prabha
www.kannadaprabha.com