ಕೋವಿಡ್-19 ಮೂರನೇ ಅಲೆ ಹಿನ್ನೆಲೆ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ; ಡಿಸೆಂಬರ್ ಅಧಿವೇಶನ ಬೆಳಗಾವಿಯಲ್ಲಿ ಬೊಮ್ಮಾಯಿ ಭರವಸೆ

ಕೋವಿಡ್ 19 ಮೂರನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಭಾಗಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ಚಕ್ ಪೋಸ್ಟ್ ಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿ ಸೂಚನೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Updated on

ವಿಜಯಪುರ: ಕೋವಿಡ್ 19 ಮೂರನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಭಾಗಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ಚಕ್ ಪೋಸ್ಟ್ ಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೋವಿಡ್ 19 ಮೂರನೇ ಅಲೆಯ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಆಗಮಿಸುವ ನಾಗರಿಕರ ಬಗ್ಗೆ ತೀವ್ರ ನಿಗಾ ಇಟ್ಟು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ನಿರಂತರ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ನಿಗಾ ಇಡುವಂತೆ ಸೂಚನೆ ನೀಡಿದರು.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕೋವಿಡ್ 19 ಲಸಿಕೆಗಳ ಸರಬರಾಜು ಹೆಚ್ಚಿಸಲು ಪ್ರಯತ್ನಿಸಲಾಗುವುದು. ವಿಶೇಷವಾಗಿ  ಈ ಎರಡೂ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಪ್ರತಿ ದಿನಕ್ಕೆ ತಲಾ 25000 ಸಾವಿರ ಲಸಿಕೆಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಕೋವಿಡ್ 19 ಮೂರನೇ ಅಲೆಯ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ವಿಶೇಷ ಗಮನ ನೀಡಬೇಕು. ಮಕ್ಕಳಿಗಾಗಿ ಜಿಲ್ಲಾ ಆಸ್ಪತ್ರೆ ಗಳಲ್ಲಿ ಹೆಚ್ಚಿನ ಐಸಿಯು ಬೆಡ್ ಗಳನ್ನು ಮೀಸಲಿಡಬೇಕು. ಮಕ್ಕಳ ಬೆಳವಣಿಗೆ ಸೇರಿದಂತೆ ಅಪೌಷ್ಟಿಕತೆ ನಿವಾರಣೆಗೆ ಗಮನ ಇಟ್ಟು  ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರಗಳ ವಾರ್ಡ್ ವ್ಯಾಪ್ತಿಯಲ್ಲಿ ಮಕ್ಕಳ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಬೇಕು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹಾಗೂ ಅಪೌಷ್ಟಿಕತೆ ಕೊರತೆ ನೀಗಿಸಲು ಗಮನ ನೀಡಲು ಸೂಚಿಸಿದರು.

ಬ್ಲಾಕ್ ಫಂಗಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರೋಗಿಗಳ ಚಿಕಿತ್ಸೆ ವೆಚ್ಚ ಹೆಚ್ಚಿನ ರೀತಿಯಲ್ಲಿ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಪಡೆಯುವ ರೋಗಿಗಳ ಚಿಕಿತ್ಸೆ ಔಷಧಿ  ವೆಚ್ಚ ಸರ್ಕಾರದಿಂದ ಭರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕೋವಿಡ್ 19 ಮೊದಲ ಹಾಗೂ 2ನೇ ಅಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸವಾಲನ್ನು ಎದುರಿಸಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು 3ನೇ ಅಲೆ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳೊಂದಿಗೆ ಸಜ್ಜುಗೊಳ್ಳುವಂತೆ ಅವರು ಸೂಚನೆ ನೀಡಿದರು.

ಮಧ್ಯಮ ಹಾಗೂ ಬೃಹತ್ ಉದ್ಯಮಿದಾರರು ತಮ್ಮ ಸಿಬ್ಬಂದಿಗಳಿಗೆ ಅವರೇ ಪ್ರಥಮ ಹಾಗೂ 2ನೇ ಲಸಿಕೆ ದೊರಕಿಸಬೇಕು. ವಿಜಯಪುರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಉನ್ನತೀಕರಣಕ್ಕಾಗಿ 22 ಕೋಟಿ ರೂ. ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಳಗಾವಿಯಲ್ಲಿ ಅಧಿವೇಶನ: ಸಿಎಂ ಬೊಮ್ಮಾಯಿ

ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲೇ ಬೆಳಗಾವಿಯ ಸುವರ್ಣ ವಿಧಾನಸೌಧವೂ ಕಾರ್ಯನಿರ್ವಹಣೆ ಮಾಡುವಂತೆ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸುವರ್ಣ ವಿಧಾನ ಸೌಧದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಹೇಳಿದ್ದಾರೆ. 

ಡಿಸೆಂಬರ್ ನಲ್ಲಿ ಸುವರ್ಣ ವಿಧಾನಸೌಧದಲ್ಲೇ ಅಧಿವೇಶನ ನಡೆಸುವುದಾಗಿಯೂ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಸುವರ್ಣ ವಿಧಾನಸೌಧವನ್ನು ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಬದ್ಧವಾಗಿದ್ದು ಬೆಳಗಾವಿಯಲ್ಲಿನ ಸುವರ್ಣ ಸೌಧವನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡುವಂತೆ ಮಾಡಲು ತಮ್ಮ ಬಳಿ ಯೋಜನೆಗಳಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಕ್ಕರೆ ಕಮಿಷನರೇಟ್ ನ್ನು ಬೆಳಗಾವಿಗೆ ವರ್ಗಾವಣೆ ಮಾಡುವ ಕಬ್ಬು ಬೆಳೆಗಾರರ ದೀರ್ಘಾವಧಿ ಆಗ್ರಹದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, ಈ ಬೇಡಿಕೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com