ಮೆಟ್ರೋ ಕಾಮಗಾರಿ: ವರ್ಕ್ ಫ್ರಮ್ ಹೋಮ್ ಮುಂದುವರೆಸಲು ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳಿಗೆ ಸರ್ಕಾರ ಸಲಹೆ!

ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರೆಸುವುದನ್ನು ಕಂಪನಿಗಳು ಪರಿಗಣಿಸಬೇಕೆಂದು ರಾಜ್ಯ ಸರ್ಕಾರ ಸಲಹೆ ನೀಡಿದೆ.
ವರ್ಕ್ ಫ್ರಮ್ ಹೋಮ್ (ಸಂಗ್ರಹ ಚಿತ್ರ)
ವರ್ಕ್ ಫ್ರಮ್ ಹೋಮ್ (ಸಂಗ್ರಹ ಚಿತ್ರ)

ಬೆಂಗಳೂರು: ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರೆಸುವುದನ್ನು ಕಂಪನಿಗಳು ಪರಿಗಣಿಸಬೇಕೆಂದು ರಾಜ್ಯ ಸರ್ಕಾರ ಸಲಹೆ ನೀಡಿದೆ.

ಹೊರ ವರ್ತುಲ ರಸ್ತೆ ಅಥವಾ ಒಆರ್ ಆರ್ ನಲ್ಲಿ 800+ ಹೆಚ್ಚು ಕಂಪನಿಗಳಿದ್ದು 1.5 ಲಕ್ಷ ಐಟಿ ಉದ್ಯೋಗಿಗಳು ಈ ವ್ಯಾಪ್ತಿಯಲ್ಲಿ ಬರುವ ಕಂಪನಿಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಲಹೆ, ಸೂಚನೆಗಳು ಸಹಕಾರಿಯಾಗಬಹುದೆಂಬ ನಿರೀಕ್ಷೆ ಇದೆ.

ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಪಾರ್ಕ್ ಗಳಿಗೆ ಸರ್ಕಾರ ಈ ಸಲಹೆ ನೀಡಿದ್ದು, 2022 ರ ಡಿಸೆಂಬರ್ ವರೆಗೂ ವರ್ಕ್ ಫ್ರಮ್ ಹೋಮ್ ಮುಂದುವರೆಸುವಂತೆ ಹಾಗೂ ಕಚೇರಿಗೆ ಬರಲೇಬೇಕಾದ ಸಿಬ್ಬಂದಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿಕೊಳ್ಳುವಂತೆ ಕೇಳಿದೆ.

ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇವಿ ರಮಣ ರೆಡ್ಡಿ ನಾಸ್ಕಾಮ್‌ ಗೆ ಕಳಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಲಹೆಯ ಪ್ರತಿ ಲಭ್ಯವಾಗಿದೆ.

"ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರಂವರೆಗಿನ ಮೆಟ್ರೋ ಕಾಮಗಾರಿ ಒಆರ್ ಆರ್ ಮೂಲಕ ಹಾದು ಹೋಗಲಿದ್ದು, ಸರ್ವಿಸ್ ರಸ್ತೆ ಹಾಗೂ 6 ಲೈನ್ ಗಳ ರಸ್ತೆ ಇದ್ದರೂ  ಈ ಪ್ರದೇಶ ಮೊದಲೇ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ. ಈಗ ಈ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯಲಿದ್ದು, ವಾಹನ ದಟ್ಟಣೆ ತಪ್ಪಿಸುವುದಕ್ಕಾಗಿ ಐಟಿ ಕಂಪನಿಗಳು ತಮ್ಮ ನೌಕರರಿಗೆ 2022 ರ ಡಿಸೆಂಬರ್ ವರೆಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕಿದೆ. ಕಚೇರಿಗೆ ಆಗಮಿಸಲೇ ಬೇಕಿರುವವರ ಸಮಯವನ್ನು ಬದಲಾವಣೆ ಮಾಡಲು ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದವು, ಇದು ಒತ್ತಾಯಪೂರ್ವಕವಲ್ಲ, ಸಲಹೆಯಷ್ಟೇ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ರೆಡ್ಡಿ ಮಾಹಿತಿ ನೀಡಿದ್ದಾರೆ.

ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ಐಟಿ ಕಂಪನಿಗಳು ತೆಗೆದುಹಾಕಿದಲ್ಲಿ ಅದರಿಂದ ಉಂಟಾಗುವ ವಾಹನ ದಟ್ಟಣೆಯನ್ನು ತಡೆಯುವುದು ಕಷ್ಟ ಎಂದು ಸಲಹೆಯಲ್ಲಿ ಸರ್ಕಾರ ಅಭಿಪ್ರಾಯಪಟ್ಟಿದೆ.

ಕಚೇರಿಗೆ ಬರುವ ಐಟಿ ಉದ್ಯೋಗಿಗಳು ಬಿಎಂಟಿಸಿ ಬಸ್ ಅಥವಾ ಕಂಪನಿಯ ಬಸ್ ಸೇವೆ ಬಳಸುವುದನ್ನು ಉತ್ತೇಜಿಸಲಾಗಿದೆ ಎಂದೂ ಸರ್ಕಾರ ಹೇಳಿದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಮಾತನಾಡಿ, "ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಒಂದಷ್ಟು ಅನನುಕೂಲಗಳನ್ನು ಸಾರ್ವಜನಿಕರು ಎದುರಿಸಲೇಬೇಕಾಗುತ್ತದೆ, ಯೋಜನೆಯನ್ನು ಗಡುವಿನ ಸಮಯಕ್ಕೂ ಮೊದಲೇ ಮುಕ್ತಾಯಗೊಳಿಸುವ ಮೂಲಕ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ಶೀಘ್ರ ತಗ್ಗಿಸಲು ಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.

"ಒಆರ್ ಆರ್ ನ ಸಂಸ್ಥೆಗಳ ಒಕ್ಕೂಟದ ಕನ್ಸಲ್ಟೆಂಟ್ ಕೃಷ್ಣ ಕುಮಾರ್ ಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,  ಸಲಹೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸಂಬಂಧ ಸರ್ಕಾರ ಪರಿಷ್ಕೃತ ಹೇಳಿಕೆ ಬಿಡುಗಡೆ ಮಾಡುವುದನ್ನು ಕಾಯುತ್ತಿದ್ದೇವೆ ಪರಿಷ್ಕೃತ ಆದೇಶದ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com