ನಾಳೆ ಸಿಎಂ ದೆಹಲಿಗೆ; ಸಾಂದರ್ಭಿಕವಾಗಿ ಸಂಪುಟದಲ್ಲಿ ಬಾಕಿ ಉಳಿದಿರುವ ಸ್ಥಾನಗಳ ಭರ್ತಿ ಎಂದ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರು ನಾಳೆ ದೆಹಲಿಗೆ ಭೇಟಿ ನೀಡಲಿದ್ದಾರೆ.
ಮಹದಾಯಿ, ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಸಮಸ್ಯೆಗಳ ಸಂಬಂಧ ಆ.26 ರಂದು ಚರ್ಚಿಸಲು ಕೇಂದ್ರದ ಸಚಿವರ ಭೇಟಿಗೆ ಸಿಎಂ ಸಮಯಾವಾಕಾಶ ಕೇಳಿದ್ದು, ಭೇಟಿಯಲ್ಲಿ ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಬೊಮ್ಮಾಯಿ ಚರ್ಚಿಸಲಿದ್ದಾರೆ,
ದೆಹಲಿಗೆ ತೆರಳುತ್ತಿರುವ ಬಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ ಸಿಎಂ, ದೆಹಲಿಯಲ್ಲಿ ನೀರಾವರಿ ಸಮಸ್ಯೆಗಳ ಬಗ್ಗೆ ವರಿಷ್ಠರು ಹಾಗೂ ಸಂಬಂಧಪಟ್ಟ ಸಚಿವರ ಭೇಟಿಗೆ ಸಮಯಾವಾಕಾಶ ಕೇಳಿದ್ದೇನೆ. ಕೇಂದ್ರ ಆರೋಗ್ಯ, ಹಣಕಾಸು, ಜಲಶಕ್ತಿ, ಕೃಷಿ ಹಾಗೂ ರಕ್ಷಣಾ ಸಚಿವರ ಸಮಯ ಕೇಳಿದ್ದು, ಸಮಯಾವಕಾಶ ಸಿಗುತ್ತಿದ್ದಂತೆ ಅಲ್ಲಿ ಚರ್ಚಿಸಿ ದೆಹಲಿಯಿಂದ ಬೆಂಗಳೂರಿಗೆ ಬಂದ ಬಳಿಕ ಆ.27 ರಂದು ಕಾನೂನು ತಜ್ಞರ ಸಭೆ ನಡೆಸುತ್ತಿರುವುದಾಗಿ ಹೇಳಿದರು.
ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ರಾಜ್ಯದ ಹಿರಿಯ ವಕೀಲರು, ಕಾನೂನು ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ನೀರಾವರಿ ವಿವಾದದ ಬಗ್ಗೆ ರಾಜ್ಯದ ಮುಂದಿನ ನಡೆಯ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು. ಕರ್ನಾಟಕದ ನೆಲ, ಜಲ, ಭಾಷೆಯ ಹಿತರಕ್ಷಣೆಗೆ ಸರ್ವ ಪ್ರಯತ್ನ ಮಾಡಲಾಗುವುದು, ಈ ವಿಷಯದಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನೆಲ ಜಲದ ವಿಚಾರ ಬಂದಾಗ ಯಾರೂ ಸಹ ರಾಜಕಾರಣ ಮಾಡಬಾರದು. ಹಿಂದೆ ನಾವೆಲ್ಲ ನೆಲ ಜಲ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡಿದ್ದಕ್ಕೆ ಇತಿಹಾಸದಲ್ಲಿ ಸಾಕ್ಷಿ ಇದೆ ಎಂದರು.
ಹಿಂದಿನ ಸಂದರ್ಭಗಳಲ್ಲಿ ಏನೇನಾಗಿದೆ ಎಂಬುದನ್ನು ತಿಳಿಯಲಿ ಎಂದು ದೇವೇಗೌಡರಿಗೆ ಸೂಚ್ಯವಾಗಿ ಹೇಳಿದ ಸಿಎಂ, ಜೆಡಿಎಸ್ ನವರಿಗೆ ಪಾದಯಾತ್ರೆ ಮಾಡಲು ಸ್ವಾತಂತ್ರ್ಯ ಇದೆಯಾದರೂ ನೆಲ ಜಲ ವಿಚಾರದಲ್ಲಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳಲು ಎಲ್ಲ ಪ್ರಯತ್ನ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲವೆಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಚಿವ ಸಂಪುಟದಲ್ಲಿ ಬಾಕಿ ಉಳಿದಿರುವ ಸಚಿವ ಸ್ಥಾನಗಳನ್ನು ಸಾಂದರ್ಭಿಕವಾಗಿ ಭರ್ತಿ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಸಂಪುಟದಲ್ಲಿ ನಾಲ್ಕ ಸಚಿವ ಸ್ಥಾನಗಳು ಬಾಕಿ ಉಳಿದಿವೆ. ಖಾಲಿ ಸ್ಥಾನಗಳನ್ನು ಭರ್ತಿ ಮಾಡು ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದುವರೆಯುವುದಾಗಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ