ಪುತ್ತೂರು: ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಗರದ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಅವರಣದಲ್ಲಿರುವ ಭತ್ತದ ಗದ್ದೆಯಲ್ಲಿ ಹಿಂದುಯೇತರರು ವಾಹನ ಪಾರ್ಕಿಂಗ್ ಮಾಡಬಾರದು ಎಂದು ಸೂಚನೆ ಹೊರಡಿಸುವ ಮೂಲಕ ದೇವಾಲಯ ಆಡಳಿತ ಮಂಡಳಿ ವಿವಾದಕ್ಕೆ ಕಾರಣವಾಗಿದೆ.
ದೇವಾಲಯದ ಆಡಳಿತ ಮಂಡಳಿ ನೋಟಿಸ್ ಬೋರ್ಡಿನಲ್ಲಿ ಈ ಸಂಬಂಧ ಸೂಚನೆಯನ್ನು ಬರೆದಿತ್ತು. ಅದರಲ್ಲಿ ಹಿಂದುಯೇತರರು ಭತ್ತದಗದ್ದೆಯಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬರೆಯಲಾಗಿತ್ತು.
ಈ ಬಗ್ಗೆ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೇಶವ್ ಪ್ರಸಾದ್ ಮುಳಿಯ ಪ್ರತಿಕ್ರಿಯೆ ನೀಡಿದ್ದು, ಇದು ದೇವಾಲಯ ಸಮಿತಿ ಕೈಗೊಂಡ ನಿರ್ಧಾರವಾಗಿದೆ ಎಂದಿದ್ದಾರೆ.
ದೇವಾಲಯ ಆವರಣದ ಉಸ್ತುವಾರಿ ಅಧಿಕಾರವನ್ನು ಮುಜರಾಯಿ ಇಲಾಖೆ ನೀಡಿದೆ. ಅದರನ್ವಯ ದೇವಾಲಯ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ಸ್ಪಷ್ಟನೆ ನೀಡಿದ್ದಾರೆ.
ದೇವಾಲಯ ಆಡಳಿತ ಮಂಡಳಿಯ ನಿರ್ಧಾರವನ್ನು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಖಂಡಿಸಿದ್ದಾರೆ. ವಿವಿಧ ಧರ್ಮಕ್ಕೆ ಸೇರಿದವರೂ ಕೂಡಾ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಾರೆ, ಪೂಜಿಸುತ್ತಾರೆ. ದೇವಸ್ಥಾನ ಎಲ್ಲರಿಗೂ ಸೇರಿದ್ದು ಎಂದು ಕಿಡಿ ಕಾರಿದ್ದಾರೆ.
ಅಲ್ಲದೆ ನಗರದಲ್ಲಿ ಪಾರ್ಕಿಂಗ್ ಸ್ಥಳದ ಕೊರತೆ ಇರುವುದರಿಂದ ಜನಸಾಮಾನ್ಯರು ಭತ್ತದ ಗದ್ದೆಯನ್ನು ಪಾರ್ಕಿಂಗ್ ಮಾಡಲು ಬಳಸುತ್ತಿದ್ದರು. ಅಲ್ಲಿ ನಿರ್ಭಂಧ ಹೇರಿದರೆ ಇನ್ನೆಲ್ಲಿಯೂ ವಾಹನ ನಿಲ್ಲಿಸಲು ಜಾಗವಿಲ್ಲ ಎಂದವರು ಹೇಳಿದ್ದಾರೆ.
Advertisement