ವಿಪರೀತ ಕಾರು, ಬೈಕ್ ಕ್ರೇಜ್ ಹೊಂದಿದ್ದ ಕರುಣಾ ಸಾಗರ್: ಟಿವಿ ನೋಡಿ ಮಗಳ ಸಾವಿನ ಸುದ್ದಿ ಕೇಳಿದ ಬಿಂದು ತಂದೆ!

ನಗರದ ಕೋರಮಂಗಲ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದ ಭೀಕರ ಆಡಿ ಕಾರು ಅಪಘಾತದಲ್ಲಿ ತಮಿಳು ನಾಡಿನ ಹೊಸೂರಿನ ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ್ ಮತ್ತು ಆತನ ಭಾವಿ ಪತ್ನಿ ಬಿಂದು ಸೇರಿದ್ದಾರೆ.
ಪುತ್ರ ಕರುಣಾ ಸಾಗರ್ ಜೊತೆ ಶಾಸಕ ವೈ ಪ್ರಕಾಶ್
ಪುತ್ರ ಕರುಣಾ ಸಾಗರ್ ಜೊತೆ ಶಾಸಕ ವೈ ಪ್ರಕಾಶ್
Updated on

ಬೆಂಗಳೂರು: ನಗರದ ಕೋರಮಂಗಲ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದ ಭೀಕರ ಆಡಿ ಕಾರು ಅಪಘಾತದಲ್ಲಿ ತಮಿಳು ನಾಡಿನ ಹೊಸೂರಿನ ಡಿಎಂಕೆ ಶಾಸಕ ವೈ ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ್ ಮತ್ತು ಆತನ ಭಾವಿ ಪತ್ನಿ ಬಿಂದು ಸೇರಿದ್ದಾರೆ.

ಶಾಸಕರ ಪುತ್ರ ಕರುಣಾ ಸಾಗರ್ ಉದ್ಯಮ ನಡೆಸುತ್ತಿದ್ದ. ಯೌವ್ವನದ ಹರೆಯ, ಕಾರು, ಬೈಕ್ ಕ್ರೇಜ್ ವಿಪರೀತವಾಗಿತ್ತು. ಹೇಳಿಕೇಳಿ ಶಾಸಕರ ಪುತ್ರ, ಒಬ್ಬನೇ ಮಗ, ಐಷಾರಾಮಿ ಬದುಕು, ಹೀಗಾಗಿ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಐಷಾರಾಮಿ ದುಬಾರಿ ಕಾರು, ಬೈಕ್ ಗಳನ್ನು ರೈಡ್ ಮಾಡುವುದು, ಫೋಟೋಶೂಟ್ ಮಾಡಿಸುವ ಹುಚ್ಚು ಕರುಣಾ ಸಾಗರ್ ಗೆ ಇತ್ತು. ಕೊನೆಗೆ ಅದರಿಂದಲೇ ಮೃತ್ಯು ಸಂಭವಿಸಿದ್ದು ಮಾತ್ರ ದುರಂತ. ನಿನ್ನೆ ಮಧ್ಯರಾತ್ರಿ ಅಪಘಾತವಾಗುವುದಕ್ಕೆ ಮೊದಲು ತನ್ನ ಇನ್ಸ್ಟಾಗ್ರಾಂನಲ್ಲಿ ಕಾರು ಡ್ರೈವಿಂಗ್ ನ ಕೆಲವೇ ಸೆಕೆಂಡುಗಳ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದ. ಆತನಲ್ಲಿ ಹಲವು ಕಾರು ಮತ್ತು ಬೈಕ್ ಸಂಗ್ರಹವಿತ್ತು ಎಂದು ತಿಳಿದುಬಂದಿದೆ.

ಸದ್ಯ ಬೆಂಗಳೂರಿನ ಸೈಂಟ್ ಜಾನ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ಮುಗಿದು ಶವಗಳನ್ನು ಚೆನ್ನೈಗೆ ಹಸ್ತಾಂತರಿಸಲಾಗುತ್ತಿದೆ. ಶಾಸಕ ವೈ ಪ್ರಕಾಶ್ ಅವರು ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಾರೆ. 

ಏಕಾಂಗಿಯಾದ ಶಾಸಕರು: ಬಿ ವೈ ಪ್ರಕಾಶ್ ಅವರಿಗೆ ಕರುಣಾಸಾಗರ್ ಏಕೈಕ ಪುತ್ರ. ಬೇರೆ ಮಕ್ಕಳಿಲ್ಲ, ಇವರ ಪತ್ನಿ ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಇನ್ನು ಪುತ್ರ ಕರುಣಾಸಾಗರ್ ಗೆ ಮದುವೆ ನಿಶ್ಚಯವಾಗಿದ್ದ ಯುವತಿ ಬಿಂದು ಬೆಂಗಳೂರಿನವರಾಗಿದ್ದು ಚೆನ್ನೈಯಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. 

ಕರುಣಾ ಸಾಗರ್ ಮತ್ತು ಬಿಂದುಗೆ ಸ್ನೇಹ ಬೆಳೆದು ಪ್ರೇಮಾಂಕುರವಾಗಿ ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದ್ದರು. ಆದರೆ ಬಿಂದುವಿನ ತಂದೆ ಮನೆಯವರಿಗೆ ಈ ಸಂಬಂಧ ಅಷ್ಟೊಂದು ಇಷ್ಟವಿರಲಿಲ್ಲ, ಮನೆಯಲ್ಲಿ ವೈಯಕ್ತಿಕ ಸಮಸ್ಯೆಯಿದ್ದರಿಂದ ಮತ್ತು ಶಾಸಕರ ಪುತ್ರ ಆರ್ಥಿಕ, ಸಾಮಾಜಿಕವಾಗಿ ದೊಡ್ಡ ಅಂತರವಿರುತ್ತದೆ ಎಂದು ಬಿಂದುವಿನ ತಂದೆ ಈ ಮದುವೆ ಬೇಡ ಎಂದು ಮಗಳಿಗೆ ಬುದ್ದಿ ಹೇಳಿದ್ದರಂತೆ. ಆದರೆ ಮಗಳು ಬಿಂದು ನಾನು ಮದುವೆಯಾಗುವುದಾದರೆ ಅವನನ್ನೇ ಆಗುವುದು, ಇಲ್ಲದಿದ್ದರೆ ಆಗುವುದಿಲ್ಲ ಎಂದು ಹಠ ಹಿಡಿದಿದ್ದಳಂತೆ. ಮಗಳು ದೊಡ್ಡವಳಾಗಿದ್ದಾಳೆ, ಸರಿ ಹಾಗಾದರೆ ಸಂತೋಷ ಎಂದು ಮಗಳನ್ನು ಕರುಣಾ ಸಾಗರ್ ಜೊತೆ ಮದುವೆ ಮಾಡಿಕೊಡರು ಒಪ್ಪಿಕೊಂಡರಂತೆ.

ಟಿ ವಿ ಚಾನೆಲ್ ಮೂಲಕ ಬಿಂದು ಸಾವಿನ ಮಾಹಿತಿ ಪಡೆದ ತಂದೆ: ಚೆನ್ನೈಯಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಕ್ಕಿ ಪಿಜಿಯಲ್ಲಿ ಉಳಿದುಕೊಂಡಿದ್ದ ಬಿಂದು ನಿನ್ನೆ ರಾತ್ರಿ 8 ಗಂಟೆಗೆ ತನ್ನ ತಂದೆಗೆ ಫೋನ್ ಮಾಡಿ ಚೆನ್ನೈಯಲ್ಲಿದ್ದೇನೆ, ಊಟ ಮಾಡಿ ಮಲಗುತ್ತೇನೆ ಎಂದು ಸುಳ್ಳು ಹೇಳಿದ್ದಳಂತೆ. ಬೆಂಗಳೂರಿಗೆ ಕರುಣಾ ಸಾಗರ್ ಜೊತೆ ಬಂದಿದ್ದ ವಿಷಯ ಬಿಂದು ತಂದೆಗೆ ಗೊತ್ತಿರಲಿಲ್ಲ.

ಇಂದು ಬೆಳಗ್ಗೆ ಟಿವಿಯಲ್ಲಿ ನೋಡಿದಾಗಲೇ ಮಗಳು-ಭಾವಿ ಅಳಿಯ ನಿಧನರಾಗಿದ್ದಾರೆ ಎಂದು ಗೊತ್ತಾಗಿದ್ದು. ಸುದ್ದಿ ತಿಳಿದ ಕೂಡಲೇ ಸೈಂಟ್ ಜಾನ್ಸ್ ಆಸ್ಪತ್ರೆಗೆ ಬಂದ ಬಿಂದು ತಂದೆ ಮಗಳ ಸಾವಿನಿಂದ ತೀವ್ರ ನೊಂದು ಹೋಗಿದ್ದಾರೆ.

ಬಿಂದುವನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಕರುಣಾ ಸಾಗರ್: ನಿನ್ನೆ ಆಡಿ ಕಾರು ಅಪಘಾತವಾಗುವುದಕ್ಕೆ ಮೊದಲು ಬಿಂದುವಿನ ಪಿಜಿಗೆ ಬಂದು ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಕರುಣಾ ಸಾಗರ್ ಜೊತೆ ಅವರ ಇತರ ಸ್ನೇಹಿತರು ನಿನ್ನೆ ಬೆಂಗಳೂರಿಗೆ ಬಂದು ನಗರದಲ್ಲಿ ಸುತ್ತಾಡಿ ನಂತರ ಹೊಟೇಲ್ ಗೆ ಹೋಗಿ ಊಟ ಮಾಡಿದ್ದಾರೆ. ಅಲ್ಲಿ ಪಾರ್ಟಿ ಮಾಡಿ ವಾಪಸ್ ತಮಿಳು ನಾಡು ಕಡೆ  ಮಧ್ಯರಾತ್ರಿ ಹೊರಟಿದ್ದರು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com