ಮಹಿಳೆ ಎದುರೇ ಕ್ಯಾಬ್ ಚಾಲಕ ಹಸ್ತಮೈಥುನ: ಕ್ರಮಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚನೆ
ಬೆಂಗಳೂರು: ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಎದುರು ಹಸ್ತಮೈಥುನ ಮಾಡಿಕೊಂಡು ಕೆಟ್ಟದಾಗಿ ವರ್ತಿಸಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಸಂತ್ರಸ್ತೆ ಟ್ವೀಟ್‌ನಲ್ಲಿ ಘಟನೆಯನ್ನು ವಿವರಿಸಿದ್ದಾರೆ. ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್‌ನಲ್ಲಿ ಹೋಗುವಾಗ ಚಾಲಕ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ನಾನು ಇದನ್ನು ಗಮನಿಸಿದೆ. ಆದರೆ ಆತ ಏನು ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದ. ಈ ವೇಳೆ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದ್ದರಿಂದ ಕ್ಯಾಬ್ ನಿಲ್ಲಿಸಿದ. ಬಳಿಕ ನಾನು ಕೆಳಗೆ ಇಳಿದುಕೊಂಡು ಮತ್ತೊಂದು ಕ್ಯಾಬ್‌ನಲ್ಲಿ ಮನೆಗೆ ತೆರಳಿದೆ ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯಿಂದ ನಮ್ಮ ಮನೆ ಎಂದು ಭಾವಿಸುವ ಬೆಂಗಳೂರು ನಗರ ಅಸುರಕ್ಷಿತ ಎನ್ನುವ ಭಾವನೆ ಮೂಡಿದೆ. ನನ್ನಲ್ಲಿ ಭಯ ಹುಟ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷತೆಯ ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್‌ಗಳಲ್ಲಿ ತೆರಳುವಾಗ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್ ಮಾಡಲು ಲೈವ್ ಲೊಕೇಶನ್ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಓಲಾ ಕಂಪನಿಗೆ ದೂರು ನೀಡಿದ ನಂತರ ಚಾಲಕನನ್ನು ಕೆಲಸದಿಂದ ತೆಗೆದಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಘಟನೆ ಸಂಬಂಧ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ದುರ್ವತನೆಯ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತಮ್ಮನ್ನು ಸಂಪರ್ಕಿಸಲಿದ್ದಾರೆ. ಓಲಾ ಕಂಪನಿ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ