ಫೋರ್ಡ್ ಇಂಡಿಯಾದ ಚಿಹ್ನೆ
ಫೋರ್ಡ್ ಇಂಡಿಯಾದ ಚಿಹ್ನೆ

ಕಾರಿನ ಉತ್ಪಾದನಾ ದೋಷ: ಬೆಂಗಳೂರಿನ ಉದ್ಯಮಿಗೆ ಪರಿಹಾರ ಹಣ ನೀಡುವಂತೆ ಫೋರ್ಡ್ ಇಂಡಿಯಾಗೆ ಗ್ರಾಹಕ ವೇದಿಕೆ ಆದೇಶ

ತಯಾರಿಕೆಯಲ್ಲಿ ದೋಷವಿದ್ದ ಕಾರನ್ನು ಗ್ರಾಹಕನಿಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಖರೀದಿಸಿದ ಕಾರಿನ ವೆಚ್ಚವನ್ನು ಹಿಂತಿರುಗಿಸುವುದರ ಜೊತೆಗೆ ಪರಿಹಾರವನ್ನು ನೀಡುವಂತೆ ಕಾರು ತಯಾರಿಕಾ ಕಂಪೆನಿ ಫೋರ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.

ಬೆಂಗಳೂರು: ತಯಾರಿಕೆಯಲ್ಲಿ ದೋಷವಿದ್ದ ಕಾರನ್ನು ಗ್ರಾಹಕನಿಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಖರೀದಿಸಿದ ಕಾರಿನ ವೆಚ್ಚವನ್ನು ಹಿಂತಿರುಗಿಸುವುದರ ಜೊತೆಗೆ ಪರಿಹಾರವನ್ನು ನೀಡುವಂತೆ ಕಾರು ತಯಾರಿಕಾ ಕಂಪೆನಿ ಫೋರ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ ಮತ್ತು ನಗರ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಬಗೆಹರಿಸುವ ವೇದಿಕೆ, ಫೋರ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪಿಪಿಎಸ್ ಬ್ಯುಸ್ ನೆಸ್ ಸೊಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ ಗೆ ಫ್ರೇಜರ್ ಟೌನ್ ನ ಉದ್ಯಮಿ ಕಮಲ್ ಶರ್ಮ ಎಂಬುವವರಿಗೆ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?: ನಗರದ ಉದ್ಯಮಿ ಕಮಲ್ ಶರ್ಮ 11 ಲಕ್ಷದ 37 ಸಾವಿರ ರೂಪಾಯಿ ಕೊಟ್ಟು ಫೋರ್ಡ್ ಇಂಡಿಯಾ ಕಂಪೆನಿಯ ಎಕೊಸ್ಪೊರ್ಟ್ (ಟ್ರೆಂಡ್-ಎಂಟಿ) ಕಾರನ್ನು ಖರೀದಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಕಾರು ರೆಜಿಸ್ಟರ್ ಆಗಿತ್ತು. ಆದರೆ ಕಾರು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಖರೀದಿಸಿದ ಕೆಲವೇ ದಿನಗಳಲ್ಲಿ ರಿಪೇರಿ ಬರಲು ಆರಂಭಿಸಿತು. ತಯಾರಿಕಾ ದೋಷ ಕಾರಿನಲ್ಲಿ ಕಂಡುಬಂದಿತ್ತು. ಹೀಗಾಗಿ ಕಂಪೆನಿಗೆ ದೂರು ನೀಡಿದ್ದರು. ಆದರೆ ಫೋರ್ಡ್ ಇಂಡಿಯಾ ಕಂಪೆನಿ ಕ್ಯಾರೇ ಅಂದಿರಲಿಲ್ಲ. ಆಗ ಕಮಲ್ ಶರ್ಮ ಗ್ರಾಹಕರ ವ್ಯಾಜ್ಯ ಪರಿಹಾರ ಕೇಂದ್ರಕ್ಕೆ ದೂರು ನೀಡಿದರು.

ವಾದ ವಿವಾದ ಆಲಿಸಿದ ವೇದಿಕೆ ವಾಹನದ ವೆಚ್ಚ 11 ಲಕ್ಷದ 24 ಸಾವಿರ ರೂಪಾಯಿ, ಡಿಸೆಂಬರ್ 17, 2020ರಿಂದ ಕಮಲ್ ಶರ್ಮ ಅವರು ವಾಹನ ಸಾಲಕ್ಕೆ ವರ್ಷಕ್ಕೆ ಕಟ್ಟುತ್ತಿದ್ದ ಶೇಕಡಾ 12ರಷ್ಟು ಬಡ್ಡಿ ಸೇರಿಸಿ ಸಂಪೂರ್ಣ ಹಣವನ್ನು ನೀಡಬೇಕೆಂದು ಆದೇಶಿಸಿತು. ಕಮಲ್ ಶರ್ಮ ಕಾರಿನ ರಿಪೇರಿಗೆ ಮಾಡಿದ 2 ಲಕ್ಷದ 12 ಸಾವಿರ ರೂಪಾಯಿ ಹಣವನ್ನು ಕೂಡ ನೀಡಬೇಂದು ಆದೇಶಿಸಿತು.

ಅಲ್ಲದೆ ಈ ಸಮಯದಲ್ಲಿ ಕಮಲ್ ಶರ್ಮ ಅವರಿಗೆ ಕಾರನ್ನು ಓಡಾಟಕ್ಕೆ ಬಳಸಲು ಸಾಧ್ಯವಾಗಿಲ್ಲದಿರಬಹುದು, ಸಾಕಷ್ಟು ತೊಂದರೆ ಕಿರಿಕಿರಿ ಅನುಭವಿಸಿರಬಹುದು, ಹೀಗಾಗಿ ಅನಾನುಕೂಲತೆ ಸೃಷ್ಟಿಸಿದ್ದಕ್ಕಾಗಿ 25 ಸಾವಿರ ರೂಪಾಯಿ ಅನಾನುಕೂಲ ಶುಲ್ಕ, ಹಾನಿ ಮಾಡಿದ್ದಕ್ಕೆ 25 ಸಾವಿರ ರೂಪಾಯಿ, ವ್ಯಾಜ್ಯ ಖರ್ಚಿಗೆ 5 ಸಾವಿರ ರೂಪಾಯಿಯನ್ನು ಫೋರ್ಡ್ ಇಂಡಿಯಾ ಕಂಪೆನಿ ನೀಡಬೇಕೆಂದು ವ್ಯಾಜ್ಯ ಪರಿಹಾರ ವೇದಿಕೆ ಆದೇಶಿಸಿದೆ. 

ಕಮಲ್ ಶರ್ಮ ಅವರು ಇನ್ನು 15 ದಿನಗಳೊಳಗೆ ಕಾರನ್ನು ಫೋರ್ಡ್ ಇಂಡಿಯಾ ಕಂಪೆನಿಗೆ ಹಿಂತಿರುಗಿಸಿ ಮರುಪಾವತಿ ಹಣವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com