ದೇಶದಲ್ಲಿ ನೇತ್ರದಾನಿಗಳ ತೀವ್ರ ಕೊರತೆ; ಜಾಗೃತಿ ಮೂಡಿಸುವ ಕೆಲಸ ಆಗಬೇಕು: ಸಚಿವ ಡಾ.ಕೆ.ಸುಧಾಕರ್

ಶವದಿಂದ ಕಣ್ಣನ್ನು ತೆಗೆದರೆ ಮುಖ ವಿಕಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸುಳ್ಳು. ಕನ್ನಡದ ವರನಟ ಡಾ.ರಾಜ್ ಕುಮಾರ್, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಗಳು ಕಣ್ಣು ದಾನ ಮಾಡಿದ್ದರು.
ಡಾ. ಕೆ ಸುಧಾಕರ್
ಡಾ. ಕೆ ಸುಧಾಕರ್
Updated on

ಬೆಂಗಳೂರು: ನಮ್ಮ ಸಾವಿನ ನಂತರ ನಮ್ಮ ಕಣ್ಣುಗಳಿಂದ ಇನ್ನೊಬ್ಬರಿಗೆ ದೃಷ್ಟಿ ಬರುತ್ತದೆ ಅಂದರೆ ಅದಕ್ಕಿಂತ ಸಾಕ್ಷಾತ್ಕಾರ ಇನ್ನೊಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ಬೆಂಗಳೂರಿನ ಇಂದಿರಾನಗರದಲ್ಲಿ ಡಾಕ್ಟರ್ ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಧತ್ವ ಬಹಳ ನೋವಿನ ಸಂಗತಿ. ಯಾರೇ ಇರಲಿ,  ಭಗವಂತ ಸೃಷ್ಟಿ ಮಾಡಿರುವ ಪ್ರಕೃತಿಯನ್ನು ನೋಡಲು ಸಾಧ್ಯವಾಗುವುದು ನಮ್ಮ ಕಣ್ಣುಗಳಿಂದ. ಆದರೆ  ಕಣ್ಣೇ ಇಲ್ಲದಿದ್ದರೆ ಈ ಸುಂದರ ಪ್ರಕೃತಿಯನ್ನು ಸವಿಯಲು ಅಸಾಧ್ಯ. ವಿಶ್ವದಲ್ಲಿ 4 ಕೋಟಿಗೂ ಹೆಚ್ಚು ಜನರಿಗೆ ಅಂಧತ್ವ ಇದೆ. ಭಾರತದಲ್ಲಿ ಪ್ರತಿವರ್ಷ 1 ಲಕ್ಷ ನೇತ್ರದಾನಿಗಳ ಅವಶ್ಯಕತೆ ಇದೆ. ಆದರೆ ನಮಗೆ ಸಿಗುತ್ತಿರುವ ದಾನಿಗಳ ಪ್ರಮಾಣ ಕೇವಲ 5% ಮಾತ್ರ. ಕಣ್ಣಿನ ದಾನಿಗಳ ಕೊರತೆ ನಮ್ಮನ್ನು ಕಾಡುತ್ತಿದೆ. ದೇಶದಲ್ಲಿ 10.8 ಲಕ್ಷ ಮಕ್ಕಳು ಅಂಧತ್ವಕ್ಕೆ ಒಳಗಾಗಿದ್ದಾರೆ ಎಂದರು.

ಕೋವಿಡ್ ಸಮಯದಲ್ಲಿ ನೇತ್ರದಾನ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಕಣ್ಣಿನ ದಾನ ಮಹಾದಾನವಾದರೂ ಈ ಬಗ್ಗೆ ಕೆಲ ಮೂಢನಂಬಿಕೆಗಳು ಇವೆ. ಶವದಿಂದ ಕಣ್ಣನ್ನು ತೆಗೆದರೆ ಮುಖ ವಿಕಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸುಳ್ಳು. ಕನ್ನಡದ ವರನಟ ಡಾ.ರಾಜ್ ಕುಮಾರ್, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಗಳು ಕಣ್ಣು ದಾನ ಮಾಡಿದ್ದರು. ಲಕ್ಷಾಂತರ ಜನರು ಅವರ ಪಾರ್ಥಿವ ಶರೀರ ನೋಡಿದ್ದಾರೆ. ಆದರೆ ಯಾವುದೇ ವಿಕಾರ ಕಂಡಿಲ್ಲ. ಹೀಗಾಗಿ ನೇತ್ರದಾನ ಎಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಇರಲಿ ಅಥವಾ ನೇತ್ರದಾನದ ವಿಚಾರವೇ ಆಗಿರಲಿ ಕರ್ನಾಟಕ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ಹೆಲ್ತ್ ಕೇರ್ ಉದ್ಯಮಿಗಳಿಂದ ಇದೆಲ್ಲಾ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಕೈ ಗೆಟಕುವ ರೀತಿಯಲ್ಲಿ ಹೇಲ್ತ್ ಕೇರ್ ಇಂಡಸ್ಟ್ರಿ ಕರ್ನಾಟಕದಲ್ಲಿ ಬೆಳೆದಿದೆ ಎಂದು ಹೇಳಿದರು.

ಆಯುಷ್ಮಾನ್ ಭಾರತ್ ನಿಂದ ಎಲ್ಲರಿಗೂ ಲಾಭವಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಇದರ ಉಪಯೋಗ ಆಗುತ್ತಿದೆ. ನಾವು ಎಲ್ಲಾ ಕನ್ನಡಿಗರಿಗೂ ಸಹಾಯವಾಗುವಂತೆ ಹೆಲ್ತ್ ಕೇರ್ ಫೆಸಿಲಿಟಿ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರಿ ಇರಲಿ, ಖಾಸಗಿ ಇರಲಿ ಎಲ್ಲಾ ಕಡೆಯೂ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.

ನೇತ್ರದಾನದ ಮಹತ್ವ ತಿಳಿಸಿ
ರಾಜ್ಯದಲ್ಲಿರುವ 21 ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸುವ ಯೋಜನೆ ರೂಪಿಸಿದ್ದೇವೆ. ಖಾಸಗಿ ಆಸ್ಪತ್ರೆಗಳು ದೊಡ್ಡಮಟ್ಟದಲ್ಲಿ ನೇತ್ರದಾನದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಐ ಕ್ಯಾಂಪ್ ಗಳನ್ನು ಮಾಡಬೇಕು ಎಂದು  ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ಹಾಗೂ ಭಾರತದ ಅಭಿವೃದ್ಧಿಯ ಹರಿಕಾರ. ಹಾಗೆಯೇ ಡಾ.ಎಂ.ಸಿ ಮೋದಿಯವರು ಕಣ್ಣಿನ ಆಸ್ಪತ್ರೆಗಳನ್ನು ಕಟ್ಟಿಸಿ ಎಲ್ಲರಿಗೂ ದೃಷ್ಟಿ ಸಿಗಬೇಕು ಅನ್ನುವ ಕನಸು ಕಂಡಿದ್ದರು. ತನ್ನ 40 ವರ್ಷಗಳ ಸೇವೆಯಲ್ಲಿ  ಹಲವು ಸರ್ಜರಿಗಳನ್ನು ಅವರು ಮಾಡಿದ್ದರು. ಲಕ್ಷಾಂತರ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಿದರು. ಡಾ.ಎಂ.ಸಿ.ಮೋದಿಯವರ ಸೇವೆ ಮಾದರಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com