'ನೀವೇನಾದ್ರು ಮಕ್ಕಳಿಗೆ ಮೊಟ್ಟೆ ತಿನ್ನೋಕೆ ಕೊಡಬೇಡಿ ಅಂತ ವಿರೋಧ ಮಾಡಿದ್ರೆ ನಿಮ್ಮ ಮಠದ ಬಳಿ ಬಂದು ತಿಂದು ಹೋಗ್ತೀವಿ': ಮಠಾಧೀಶರುಗಳಿಗೆ ವಿದ್ಯಾರ್ಥಿನಿ ಎಚ್ಚರಿಕೆ!
ಗಂಗಾವತಿ(ಕೊಪ್ಪಳ ಜಿಲ್ಲೆ): ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ನೀಡುವ ವಿಚಾರ ಕುರಿತು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಹಲವರು ಮೊಟ್ಟೆ ನೀಡಬೇಕೆಂದು ಹೇಳುತ್ತಿದ್ದರೆ ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಹಲವು ಮಠಾಧೀಶರು ಮಕ್ಕಳಿಗೆ ಮೊಟ್ಟೆ ವಿತರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮದಲ್ಲಿ ಹೇಳಿರುವುದು ಬಹಳ ಸುದ್ದಿಯಾಗುತ್ತಿದೆ. ಮೊಟ್ಟೆ ತಿನ್ನಬೇಡಿ ಎಂದರೆ ಹುಷಾರ್, ನಿಮ್ಮ ಮಠಕ್ಕೆ ಬಂದು ತತ್ತಿ ತಿಂದು ತೋರಿಸ್ತೀವಿ ಎಂದು ವಿದ್ಯಾರ್ಥಿನಿ ಮಠಾಧೀಶರುಗಳಿಗೆ ಸವಾಲು ಹಾಕಿದ್ದಾಳೆ.
ನಮಗೆ ತತ್ತಿ ತಿನ್ನದೆ ಬದುಕಲು ಸಾಧ್ಯವಿಲ್ಲ, ಸತ್ತು ಹೋಗುತ್ತೇವೆ, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಡಿ, ಬಾಳೆಹಣ್ಣು ಮಾತ್ರ ಕೊಡಿ ಎಂದು ವಿರೋಧ ವ್ಯಕ್ತಪಡಿಸಿದರೆ ನಿಮ್ಮ ಮಠಗಳಿಗೆ ಬಂದು ತಿಂತು ತೋರಿಸ್ತೀವಿ ನೋಡ್ತಿರಿ ಎಂದು ವಿದ್ಯಾರ್ಥಿನಿ ಆವಾಜ್ ಹಾಕಿರುವುದು ಭಾರೀ ವೈರಲ್ ಆಗಿದೆ.
ನಾವು ಒಂದಲ್ಲ ಎರಡು ಮೊಟ್ಟೆ ತಿಂತೀವಿ. ಅದನ್ನ ಕೇಳಲು ನೀವು ಯಾರು ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ. ಅಲ್ಲದೇ ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ವಾ? ನಿಮಗೆ ದಕ್ಷಿಣೆ ಹಾಕಿಲ್ವಾ ಎಂದು ಪ್ರಶ್ನಿಸಿದ ವಿದ್ಯಾರ್ಥಿನಿ, ನಾವು ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾಳೆ. ಇದೀಗ ಈ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ