ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ
ಬೆಳಗಾವಿ: ಗುರುವಾರ ಟ್ರಾಕ್ಟರ್‌ಗಳಲ್ಲಿ ಸುವರ್ಣ ವಿಧಾನಸೌಧ ಪ್ರವೇಶಿಸದಂತೆ ತಡೆದ ಬೆಳಗಾವಿಯ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯರು ಶುಕ್ರವಾರ ಹಕ್ಕು ಚ್ಯುತಿ ನಿರ್ಣಯವನ್ನು ಮಂಡಿಸಿದರು. ನಿರ್ಣಯವನ್ನು ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಅದನ್ನು ಹಕ್ಕು ಚ್ಯುತಿ ಸಮಿಗೆ ವರ್ಗಾಯಿಸಿದರು. ಈ ವಿಚಾರವನ್ನು ಚಳಿಗಾಲ ಅಧಿವೇಶನದ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ಸದಸ್ಯರಿಗೆ ತಿಳಿಸಿದರು.
ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಂದ ಆದೇಶವಿದ್ದರೂ ಸುವರ್ಣ ವಿಧಾನಸೌಧದ ಪ್ರವೇಶಿಸದಂತೆ ತಮ್ಮನ್ನು ತಡೆದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಉತ್ತರ ವಲಯ ಐಜಿಪಿ ಸತೀಶ್ ಕುಮಾರ್ ಮತ್ತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ವಿರುದ್ಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸದಸ್ಯರನ್ನು ಸುಮಾರು ಮೂರು ಗಂಟೆಗಳ ಕಾಲ ಸುವರ್ಣ ಸೌಧದ ಹೊರಗಡೆ ಕಾಯುವಂತೆ ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ. ಇದು ಜನಪ್ರತಿನಿಧಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ. ಐಪಿಎಸ್ ಅಧಿಕಾರಿಯಾಗಿ, ಜನಪ್ರತಿನಿಧಿಗಳ ಹಕ್ಕುಗಳ ಬಗ್ಗೆ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೂಡಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಇದೇ ವೇಳೆ ಕ್ರೀಡಾ ಸಚಿವ ಕೆ. ಸಿ.ನಾರಾಯಣಗೌಡ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ತೀವ್ರಗೊಂಡಿತು. ಟ್ರ್ಯಾಕ್ಟರ್, ಎತ್ತಿನಗಾಡಿ ಸೇರಿದಂತೆ ಯಾವುದೇ ವಾಹನಗಳಲ್ಲಿ ಸುವರ್ಣ ಸೌಧಕ್ಕೆ ಬರುವುದು ತಮ್ಮ ಹಕ್ಕು ಎಂದು ಎಸ್ ಆರ್ ಪಾಟೀಲ್ ಹೇಳುವುದಾದರೆ ಪ್ರತಿದಿನ ಏಕೆ ಅವರು ಸೌಧಕ್ಕೆ ಟ್ರ್ಯಾಕ್ಟರ್ ನಲ್ಲಿ ಬರುವುದಿಲ್ಲ ಎಂದು ನಾರಾಯಣಗೌಡ ಕೇಳಿದರು.
ಇದರಿಂದ ಕೆರಳಿದ ಎಸ್.ಆರ್. ಪಾಟೀಲ್, ರೈತರ ವಾಹನಗಳಿಗೆ ಅಪಮಾನ ಮಾಡುವವರು ಸಚಿವ ಸ್ಥಾನಕ್ಕೆ ನಾಲಾಯಕ್ ಎಂದು ಹೇಳಿದರು. ಸಚಿವರು ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದರು. ಆದಾಗ್ಯೂ, ಸಭಾಪತಿ ಹೊರಟ್ಟಿ ಮತ್ತು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸದಸ್ಯರ ಮನವೊಲಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ