ಬೆಂಗಳೂರು: ಇತ್ತೀಚಿಗೆ ತರಬೇತಿ ಪೂರ್ಣಗೊಳಿಸಿರುವ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಆರು ಸೂಪರ್ ಪರಿಣಾಮಕಾರಿ ಮತ್ತು ಅಸಾಧಾರಣ ಬುದ್ಧಿವಂತ ಶ್ವಾನಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸೇರಲು ಸಜ್ಜಾಗಿವೆ. ದೇಶದಲ್ಲಿ ಈ ತಳಿಯ ಶ್ವಾನಗಳನ್ನು ಭದ್ರತೆಗಾಗಿ ಆಯೋಜಿಸಿರುವ ಮೊದಲ ವಿಮಾನ ನಿಲ್ದಾಣ ಬೆಂಗಳೂರು ಆಗಲಿದೆ.
ಸಿಐಎಸ್ ಎಫ್ ಮೂಲಗಳ ಪ್ರಕಾರ, ಐದು ಹೆಣ್ಣು ಶ್ವಾನಗಳಾಗಿದ್ದು, ಅವುಗಳಿಗೆ ವಿಶೇಷವಾಗಿ ಸ್ಫೋಟಕ ನಾಶ ಕುರಿತಂತೆ ತರಬೇತಿ ನೀಡಲಾಗಿದೆ. ಅವುಗಳನ್ನು ಏರ್ ಪೋರ್ಟ್ ಸೆಕ್ಯೂರಿಟಿ ಗ್ರೂಪ್ ಯೂನಿಟ್ ಸಿಐಎಸ್ ಎಫ್ ತನ್ನ ಕೆ-9 ಶ್ವಾನಪಡೆಯಲ್ಲಿ ಸೇರ್ಪಡೆ ಮಾಡುತ್ತಿದೆ. ಆರು ಮಾಲಿನೋಯಿಸ್ ಸೇರ್ಪಡೆಯೊಂದಿಗೆ ನಮ್ಮ 15 ಪ್ರಬಲ ಶ್ವಾನ ಪಡೆಗಳಲ್ಲಿ ಏಳು ಬೆಲ್ಜಿಯನ್ ತಳಿಯ ಶ್ವಾನಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತರಳುವಿನ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ತರಬೇತಿ ಶಾಲೆಯಲ್ಲಿ ಗ್ರೇಸಿ, ಲೈಕಾ, ಲಿಲಿ, ರಾಂಬೊ, ಡೈಸಿ ಮತ್ತು ಬೆಲ್ಲಾ ತರಬೇತಿ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಸಿಐಎಸ್ ಎಫ್ ಶ್ವಾನ ತಂಡ ಲ್ಯಾಬ್ರಡಾರ್‌ಗಳು, ಜರ್ಮನ್ ಶೆಫರ್ಡ್ಸ್, ಗೋಲ್ಡನ್ ರಿಟ್ರೈವರ್ಸ್, ಕಾಕರ್ ಸ್ಪೈನಿಯೆಲ್ ಮತ್ತು ಒಂದು ಮಲಿನೋಯಿಸ್ ತಳಿಯ ಶ್ವಾನಗಳನ್ನು ಒಳಗೊಂಡಿದೆ.
2011 ಮೇ 2ರಲ್ಲಿ ಪಾಕಿಸ್ತಾನದಲ್ಲಿ ಮಾಜಿ ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರನ್ನು ಪತ್ತೆ ಹಚ್ಚಿ ಹತ್ಯೆ ಮಾಡುವಲ್ಲಿ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನವೊಂದು ಅಮೆರಿಕ ನೌಕಪಡೆಗೆ ನೆರವಾಗಿತ್ತು. ಮತ್ತೊಂದು ಶ್ವಾನ ಕೋನಾನ್, ಅಕ್ಟೋಬರ್ 27,2019ರಲ್ಲಿ ಸಿರಿಯಾದಲ್ಲಿ ಐಸಿಸ್ ಮುಖಂಡ ಅಬು ಬಕರ್ ಅಲ್ ಬಗ್ದಾದಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಬಾಂಬ್ ಪತ್ತೆ ಹಚ್ಚಲು ಹಾಗೂ ಸ್ಫೋಟಕಗಳ ನಾಶ ಕಾರ್ಯದಲ್ಲೂ ಈ ಶ್ವಾನಗಳು ಹೆಸರುವಾಸಿಯಾಗಿವೆ. ಸವಾಲಿನ ಪರಿಸ್ಥಿತಿಯಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ. ಈ ಶ್ವಾನಗಳು ಡಿಸೆಂಬರ್ 16 ರಂದು ತರಬೇತಿ ಪೂರ್ಣಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ.
Advertisement