ಸಚಿವರು, ಸಿಎಂ ಪುತ್ರ ವಿಜಯೇಂದ್ರ ಹೆಸರು ಹೇಳಿಕೊಂಡು ವಂಚನೆ: ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಬಂಧನ

ಸಚಿವರು, ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ.ಎ. ರಾಜು ಬಂಧನವಾಗಿದೆ.
ಸಚಿವ ಶ್ರೀರಾಮುಲು ಅವರೊಂದಿಗೆ ಆಪ್ತ ಸಹಾಯಕ ರಾಜಣ್ಣ(ಸಂಗ್ರಹ ಚಿತ್ರ)
ಸಚಿವ ಶ್ರೀರಾಮುಲು ಅವರೊಂದಿಗೆ ಆಪ್ತ ಸಹಾಯಕ ರಾಜಣ್ಣ(ಸಂಗ್ರಹ ಚಿತ್ರ)

ಬೆಂಗಳೂರು: ಸಚಿವರು, ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ.ಎ. ರಾಜು ಬಂಧನವಾಗಿದೆ.

ಸಚಿವ ಶ್ರೀರಾಮುಲು ಅವರ ಪಿಎ ರಾಜು ವಿರುದ್ಧ ಬಹುಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸಿಸಿಬಿಗೆ ದೂರು ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಸಾಕ್ಷಿಗಳನ್ನು ಕಲೆ ಹಾಕಿ ಸಿಸಿಬಿ ಪೊಲೀಸರು ನಿನ್ನೆ ರಾಜಣ್ಣ ಅವರನ್ನು ಬಂಧಿಸಿದ್ದಾರೆ.

ಸಿಟಿ ಸೈಬರ್ ಕ್ರೈಂ ಪೊಲೀಸ್ ಇಲಾಖೆಯಲ್ಲಿ ಬಿ ವೈ ವಿಜಯೇಂದ್ರ ಅವರು ವಂಚನೆ ದೂರನ್ನು ರಾಜಣ್ಣ ವಿರುದ್ಧ ದಾಖಲಿಸಿದ್ದರು. ಜನರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಅಲ್ಲದೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಅವರು ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ರಾಜಣ್ಣ ಮತ್ತು ಇತರ ಕೆಲವು ಮಂದಿ ವಿರುದ್ಧ ವಂಚನೆ ಹಾಗೂ ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ನಿನ್ನೆ ಸಾಯಂಕಾಲ ಬಿ ಶ್ರೀರಾಮುಲು ಅವರ ನಿವಾಸದಲ್ಲಿಯೇ ರಾಜಣ್ಣ ಬಂಧನವಾಗಿದೆ. ಕೆಲಸ ಕೊಡಿಸುವ ಆಮಿಷ ಮತ್ತು ಇತರ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ರಾಜಣ್ಣ ಹಲವರನ್ನು ನಂಬಿಸಿ ಮೋಸ ಮಾಡಿದ್ದಲ್ಲದೆ ಹಣವನ್ನು ಪಡೆದುಕೊಂಡಿದ್ದರು, ಈ ಆಧಾರದ ಮೇಲೆ ಸಾಕ್ಷಿ ಕಲೆಹಾಕಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಶ್ರೀರಾಮುಲು, ರಾಜು ನನ್ನ ಬಳಿ ಬಳ್ಳಾರಿಯಲ್ಲಿರುವಾಗಿನಿಂದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತ ನನ್ನ ಕಚೇರಿಯ ಸಿಬ್ಬಂದಿಯಲ್ಲ. ಸಿಎಂ ಪುತ್ರ ವಿಜಯೇಂದ್ರ ಕೇಸು ದಾಖಲಿಸಿದ್ದ ಕಾರಣ ಅದರ ವಿವರ ಪಡೆಯಬೇಕಾಗಿದೆ. ನನಗೆ ಸಂಪೂರ್ಣ ಮಾಹಿತಿಯಿಲ್ಲ, ರಾಜಣ್ಣ ಮೋಸ ಮಾಡಿದ್ದರೆ ಕಾನೂನು ಪ್ರಕಾರ ಆತನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. 

ಇಂದು ನ್ಯಾಯಾಲಯಕ್ಕೆ ಹಾಜರು: ನಿನ್ನೆ ಬಂಧನವಾಗಿರುವ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com