'ಬೆಂಗಳೂರು ನಗರವನ್ನು ನಿಜವಾದ ಸಿಲಿಕಾನ್ ಸಿಟಿ ಮಾಡುವುದು ನಮ್ಮ ಗುರಿ': ಸಿಟಿ ರೌಂಡ್ಸ್ ಹಾಕಿದ ಸಿಎಂ ಯಡಿಯೂರಪ್ಪ 

ಬೆಂಗಳೂರು ನಗರವನ್ನು ಸಿಲಿಕಾನ್ ಸಿಟಿ ಮಾಡಬೇಕು, ದೇಶ ವಿದೇಶಗಳಿಂದ ನಗರಕ್ಕೆ ಬರುವವರಿಗೆ ಬೆಂಗಳೂರು ನಗರ ಪ್ರಶಸ್ತ ಪ್ರವಾಸಿ ತಾಣವಾಗಬೇಕೆಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಇಂದು ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಹಾಗೂ ಟೆಂಡರ್ ಶ್ಯೂರ್ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಇಂದು ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಹಾಗೂ ಟೆಂಡರ್ ಶ್ಯೂರ್ ಕಾಮಗಾರಿಗಳ ಪರಿಶೀಲನೆ ನಡೆಸಿದರು.
Updated on

ಬೆಂಗಳೂರು: ಬೆಂಗಳೂರು ನಗರವನ್ನು ಸಿಲಿಕಾನ್ ಸಿಟಿ ಮಾಡಬೇಕು, ದೇಶ ವಿದೇಶಗಳಿಂದ ನಗರಕ್ಕೆ ಬರುವವರಿಗೆ ಬೆಂಗಳೂರು ನಗರ ಪ್ರಶಸ್ತ ಪ್ರವಾಸಿ ತಾಣವಾಗಬೇಕೆಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳ ಮಧ್ಯೆ ಅವರು ಇಂದು ಸಂಪುಟ ಸಹೋದ್ಯೋಗಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದರು. ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ಇನ್ನು 20 ವರ್ಷಗಳು ಕಳೆದರೂ ಹೊಂಡ-ಗುಂಡಿ ಕಾಣಿಸಿಕೊಳ್ಳದ ರೀತಿಯಲ್ಲಿ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಮಾಡಲಾಗಿದೆ. ಅದಕ್ಕಾಗಿ ಹಗಲು-ರಾತ್ರಿ ದುಡಿದ ಅಧಿಕಾರಿ ವರ್ಗಕ್ಕೆ, ಶಾಸಕ-ಸಚಿವ ಮಿತ್ರರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜಕಾಲುವೆ ಅಭಿವೃದ್ಧಿಪಡಿಸುವುದರತ್ತ ಮತ್ತು ಬೇರೆ ಕೆಲಸ ಕಾರ್ಯಗಳ ಅಭಿವೃದ್ಧಿಯತ್ತಲೂ ವಿಶೇಷ ಗಮನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಕೆಲಸ ಕಾರ್ಯಗಳ ಮೇಲೆ ಇನ್ನಷ್ಟು ಗಮನ ಕೊಟ್ಟು ಬೆಂಗಳೂರಿನ ರಸ್ತೆಗಳು ಅಭಿವೃದ್ಧಿಯಾಗಬೇಕೆಂಬುದು ನನ್ನ ಅಪೇಕ್ಷೆಯಾಗಿದೆ ಎಂದರು.

ಹಣಕಾಸಿನ ತೊಂದರೆಯಾಗದಂತೆ ನೋಡಿಕೊಂಡು ಕೆರೆ ಕಟ್ಟೆಗಳು, ಪಾರ್ಕ್ ಗಳು, ರಸ್ತೆಗಳು ಹೀಗೆ ಸಮಗ್ರ ಬೆಂಗಳೂರಿನ ಅಭಿವೃದ್ಧಿ ಮಾಡಿ ಹೆಚ್ಚಿನ ಕೆಲಸ ಕಾರ್ಯ ಮಾಡಲು ಕಟಿಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆ ಪರಿಶೀಲನೆ: ನಗರದ ಕಮರ್ಷಿಯಲ್ ಸ್ಟ್ರೀಟ್, ಪ್ಯಾಲೆಸ್ ರಸ್ತೆ, ರಾಜಭವನ ರಸ್ತೆ, ಇನ್ಫಾಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ರಾಜರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರ್ಬಾ ರಸ್ತೆ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ 36 ಯೋಜನೆಗಳು ಹಾಗೂ ಈಗಾಗಲೇ ಪೂರ್ಣಗೊಂಡಿರುವ ಹಲವು ರಸ್ತೆಗಳು ಮತ್ತು ಅಪೂರ್ಣಗೊಂಡಿರುವ ರಸ್ತೆಗಳ ಕಾಮಗಾರಿಯನ್ನು ಕೂಡ ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ: ಸತತ ಭಾರೀ ಮಳೆಯಿಂದ ಅನಾಹುತಗೊಂಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಾನು ಬೆಳಗ್ಗೆಯಿಂದ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಗತ್ಯವಿದ್ದರೆ ವಿಡಿಯೊ ಕಾನ್ಫರೆನ್ಸ್ ಮಾಡುತ್ತೇನೆ. ಜಲಾಶಯಗಳಲ್ಲಿ ತುಂಬಿರುವ ನೀರನ್ನು ಹೊರಬಿಡುತ್ತಿದ್ದೇವೆ, ತೊಂದರೆಯಾಗದಂತೆ ಎಚ್ಚರ ವಹಿಸುತ್ತಿದ್ದೇವೆ, ಅನಾಹುತವಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.ಪ್ರತಿಕೂಲ ಹವಾಮಾನದಿಂದಾಗಿ ಜಿಲ್ಲೆಗಳಿಗೆ ಹೋಗಿಲ್ಲ, ಇಲ್ಲದಿದ್ದರೆ ಹೆಲಿಕಾಪ್ಟರ್ ನಲ್ಲಿ ವೀಕ್ಷಿಸುತ್ತಿದ್ದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ, ನೀರಾವರಿ ಅಧಿಕಾರಿಗಳು ಅಲ್ಲಿದ್ದಾರೆ. 25ರವರೆಗೆ ಜಿಲ್ಲೆಗಳಲ್ಲಿಯೇ ಇದ್ದು ಸ್ಥಳ ಪರಿಶೀಲನೆ ಮಾಡುತ್ತಾ ಜಿಲ್ಲಾಧಿಕಾರಿಗಳೊಂದಿಗೆ ಡಿಸಿಎಂ ಗೋವಿಂದ ಕಾರಜೋಳ ಅವರು ಕೂಡ ಸ್ಥಳದಲ್ಲಿಯೇ ಇದ್ದಾರೆ ಎಂದರು.

ಪ್ರವಾಹ ಪರಿಸ್ಥಿತಿ, ವಿಕೋಪ ಸ್ಥಿತಿ ಎದುರಾದರೆ ಎದುರಿಸುವಂತಹ ಕ್ರಮವನ್ನು ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಎಲ್ಲ ರೀತಿಯ ಸವಲತ್ತುಗಳನ್ನು ನೋಡಿಕೊಂಡಿದ್ದಾರೆ. ಪ್ರಾಣಹಾನಿ, ಸಾವು ನೋವುಗಳಾಗದಂತೆ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com