ರಮೇಶ್ ಜಾರಕಿಹೊಳಿ ಸಿಡಿ ಕೇಸ್: ನಾನು ಸುರಕ್ಷಿತವಾಗಿದ್ದೇನೆ, ಪೋಷಕರನ್ನು ಸೇರುವ ಇಚ್ಛೆ ಸದ್ಯಕ್ಕಿಲ್ಲ- ಸಂತ್ರಸ್ತೆ ಹೇಳಿಕೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಸಂತ್ರಸ್ತೆ ಸೋಮವಾರ  ಹೈಕೋರ್ಟ್ ಗೆ ಹೇಳಿಕೆ ನೀಡಿದ್ದು, ಸದ್ಯ ತಾನು ಇರುವ ಜಾಗದಲ್ಲೇ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಸಂತ್ರಸ್ತೆ ಸೋಮವಾರ  ಹೈಕೋರ್ಟ್ ಗೆ ಹೇಳಿಕೆ ನೀಡಿದ್ದು, ಸದ್ಯ ತಾನು ಇರುವ ಜಾಗದಲ್ಲೇ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.

ಸದ್ಯಕ್ಕೆ ತಮ್ಮ ಪೋಷಕರನ್ನು ಸೇರುವ ಇಚ್ಚೆ ಇಲ್ಲ, ನನಗೆ ಯಾವುದೇ ಜೀವ ಬೆದರಿಕೆಯಿಲ್ಲ, ಕೇಸ್ ತನಿಖೆ ಒಂದು ಅಂತ್ಯಕ್ಕೆ ಬರುವವರೆಗೆ ಪೋಷಕರನ್ನು ಸೇರುವುದಿಲ್ಲ, ಅದರ ಬಗ್ಗೆ ನಂತರ ಯೋಚಿಸುವುದಾಗಿ ಆಕೆ ಹೇಳಿದ್ದಾರೆ.

ಧಾರವಾಡ ಹೈಕೋರ್ಟ್ ಪೀಠದ ಮುಖ್ಯ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಪ್ರದೀಪ್ ಸಿಂಗ್ ಹೇರೂರ್ ಅವರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ.

ಸಂತ್ರಸ್ತೆ ತಂದೆ ತಮ್ಮ ಮಗಳನ್ನು ಹುಡುಕಿಕೊಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು, ಆಕೆಯ ಹೇಳಿಕೆಯನ್ನು ಆದೇಶದಲ್ಲಿ ಮತ್ತು ಡಿಜಿಟಲ್ ರೂಪದಲ್ಲಿ ದಾಖಲಿಸಿದ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿದೆ. ಆಕೆಯ ತಂದೆ 2021 ರ ಮೇ 27 ರಂದು ಅರ್ಜಿಯನ್ನು ಸಲ್ಲಿಸಿದರು ಮತ್ತು ಮರುದಿನವೇ ನ್ಯಾಯಾಲಯವು ನೋಟಿಸ್ ನೀಡಿತು.

ಸಂತ್ರಸ್ತೆಯನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಆಕೆಯ ಸ್ಥಿತಿಯನ್ನು ವಿಚಾರಿಸಿ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿತ್ತು. ವಿಡಿಯೋ-ಕಾನ್ಫರೆನ್ಸ್ ಮೂಲಕ ಮಹಿಳೆಯನ್ನು ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯವು ನಿರ್ದೇಶಿಸಿತ್ತು.

ರಿಜಿಸ್ಟ್ರಾರ್ ಜನರಲ್ ಅವರು ಸಂತ್ರಸ್ತೆ ಇರುವ ಸ್ಥಳದ ವಿವರಗಳನ್ನು ಎಸ್‌ಐಟಿಯಿಂದ ಪಡೆದುಕೊಂಡು ಭೇಟಿ ನೀಡಿದ್ದರು ಹಾಗೂ ಸೋಮವಾರ ಮಧ್ಯಾಹ್ನ 2.30 ಕ್ಕೆ ನಡೆದ ವಿಚಾರಣೆಯ ವೇಳೆ, ರಿಜಿಸ್ಟ್ರಾರ್ ಜನರಲ್ ಮತ್ತು ಮಹಿಳೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಪೀಠದ ಮುಂದೆ ಹಾಜರಾದರು.

ತನಿಖಾ ವರದಿ ಪರಿಶೀಲಿಸಿದ ಪೀಠ, ಎಸ್‌ಐಟಿ ಮುಖ್ಯಸ್ಥರು ಸಹಿ ಮಾಡಬೇಕು ಎಂದು ಸೂಚಿಸಿತು. ‘ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ವೈದ್ಯಕೀಯ ರಜೆಯಲ್ಲಿರುವ ಕಾರಣ ತನಿಖಾಧಿಕಾರಿ ಸಹಿ ಮಾಡಿ ವರದಿ ಸಲ್ಲಿಸಿದ್ದಾರೆ’ ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು. ‘ಈ ತನಿಖೆಯ ಮೇಲ್ವಿಚಾರಣೆಯನ್ನು ನ್ಯಾಯಾಲಯ ಮಾಡುತ್ತಿರುವ ಕಾರಣ ಎಸ್‌ಐಟಿ ಮುಖ್ಯಸ್ಥರು ಅಥವಾ ಆ ಹುದ್ದೆಯ ಉಸ್ತುವಾರಿ ಅಧಿಕಾರಿ ಅನುಮೋದನೆ ಪಡೆದು ವರದಿ ಸಲ್ಲಿಸಬೇಕು’ ಎಂದು ಪೀಠ ಸೂಚಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com