
ಮೈಸೂರು: ಐಎಎಸ್ ಹುದ್ದೆಗೆ ರಾಜೀನಾಮೆ ನನ್ನ ದುಡುಕಿನ ನಿರ್ಧಾರವಲ್ಲ, ಬಹಳಷ್ಟು ಯೋಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಹೇಳಿದ್ದಾರೆ.
ಯಾರಿಗೂ ಸಹ ನಾನು ಮಾಡಿದ್ದೇ ಸರಿ ಎಂಬ ಭಾವನೆ ಇರಬಾರದು, ನಾನು ಯಾವುದೇ ತಪ್ಪು ಮಾಡಿದ್ದರೆ ಕ್ಷಮಿಸಿ, ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ, ಡಿಸಿ ಪ್ರತಿ ಬಾರಿ ನಿಯಮ ಬೇರೆ ಬೇರೆ ಮಾಡುತ್ತಿದ್ದರು, ಜಿಲ್ಲಾಧಿಕಾರಿ ಪ್ರತಿ ಬಾರಿ ನಿಯಮ ಬದಲಾವಣೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇಲ್ಲಿ ಯಾವ ವ್ಯಕ್ತಿ ಶ್ರೇಷ್ಟ ಅಲ್ಲ, ವ್ಯವಸ್ಥೆ ಎಲ್ಲಕ್ಕಿಂತ ಮೇಲು, ಕೋವಿಡ್ ಸಂದರ್ಭದಲ್ಲಿ ನಾನು ಸಾಧ್ಯವಾದಷ್ಟು ಜಿಲ್ಲಾಧಿಕಾರಿಗಳಿಗೆ ಪೂರಕವಾಗಿ ಜನರ ಪರವಾಗಿ ಕೆಲಸ ಮಾಡಿದ್ದೆ, ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ ಎಂದು ಇಂದು ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಶಾಸಕರು, ಇತರ ಗಣ್ಯರ ಸಮ್ಮುಖದಲ್ಲಿಯೇ ಶಿಲ್ಪಾ ನಾಗ್ ಆರೋಪ ಮಾಡಿದ್ದಾರೆ.
ಸಿಎಸ್ ಆರ್ ಫಂಡ್ ಹಣದ ಜವಾಬ್ದಾರಿ ಯಾರೂ ತೆಗೆದುಕೊಂಡಿರಲಿಲ್ಲ, ಸಿಎಸ್ ಆರ್ ಫಂಡ್ ನಿಂದ ವೈದ್ಯಕೀಯ ವ್ಯವಸ್ಥೆಗೆ ಇಟ್ಟಿರುವ ಹಣದ ಬಳಕೆಯನ್ನು ನಾನೇ ನೋಡಿಕೊಂಡೆ. ವೈದ್ಯರ ನೇಮಕಾತಿಗೆ, ಆಸ್ಪತ್ರೆಗಳಿಗೆ ಕೋವಿಡ್ ನಿರ್ವಹಣೆಗೆ ಬಳಕೆಯಾಗಿದೆ, ಪಾಲಿಕೆ ಅಧಿಕಾರಿಯಾಗಿ ಸಾಕಷ್ಟು ಜವಾಬ್ದಾರಿಯಿಂದ ಕೆಲಸ ಮಾಡಿದ್ದೇನೆ ಎಂದರು.
ರೋಹಿಣಿ ಸಿಂಧೂರಿ ಗೈರು: ಮೈಸೂರು ಜಿಲ್ಲಾಡಳಿತಕ್ಕೆ ಕೋವಿಡ್ ನಿರ್ವಹಣೆಗೆ ಸುತ್ತೂರು ಮಠ ಸಹಾಯ ಮಾಡುವ ಮತ್ತು ನಾಗರಿಕರಿಗೆ ಸಹಾಯ ಮಾಡುವ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಇಂದು ಶಿಲ್ಪಾ ನಾಗ್ ಭಾಗವಹಿಸಿದ್ದು ಸಚಿವ ಎಸ್ ಟಿ ಸೋಮಶೇಖರ್, ಎಸ್ ಎ ರಾಮದಾಸ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಆಗಮಿಸಲಿಲ್ಲ.
Advertisement