'ನಾನು ಅಂಕಿ-ಅಂಶ ವಿವರಣೆ ಕೇಳಿದ್ದು ತಪ್ಪೇ, ಆರೋಪ ಮಾಡುವುದಿದ್ದರೆ ಸಾಂಸ್ಥಿಕ ಚೌಕಟ್ಟಿನೊಳಗೆ ಮಾಡಬೇಕಿತ್ತು': ರೋಹಿಣಿ ಸಿಂಧೂರಿ 

ಮೈಸೂರಿನ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಜಗಳ ಬೀದಿಗೆ ಬಂದಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ಹಳ್ಳಿ ಕಡೆಗೆ ವೈದ್ಯರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಹಳ್ಳಿ ಕಡೆಗೆ ವೈದ್ಯರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಜಗಳ ಬೀದಿಗೆ ಬಂದಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ ಇರುತ್ತದೆ, ಯಾರಿಗೆ ಒತ್ತಡ ಇರುವುದಿಲ್ಲ ಹೇಳಿ, ಅದನ್ನು ಸಾಂಸ್ಥಿಕ ಚೌಕಟ್ಟಿನೊಳಗೆ ಮಾತನಾಡಿ ಬಗೆಹರಿಸಬೇಕೆ ಹೊರತು ಬಹಿರಂಗವಾಗಿ ಆರೋಪ ಮಾಡುವುದು ಎಷ್ಟು ಸರಿ, ನಮ್ಮ ದೂರುಗಳನ್ನು ಕೇಳಲು ಸ್ಥಳೀಯ ಆಯುಕ್ತರು, ಮುಖ್ಯ ಕಾರ್ಯದರ್ಶಿಗಳು ಇರುತ್ತಾರೆ, ದೂರು ನೀಡುವುದಿದ್ದರೂ ಅದಕ್ಕೊಂದು ವ್ಯವಸ್ಥಿತವಾಗಿ ದೂರು ನೀಡುವ ಪ್ರಕ್ರಿಯೆಯಿದೆ. ದೂರಿಗೂ ಒಂದು ವ್ಯವಸ್ಥೆ ಇದೆ, ಯಾರೂ ಕೂಡ ಆ ವ್ಯವಸ್ಥೆಯನ್ನು ಮೀರಬಾರದು, ಅವರ ಗಮನಕ್ಕೆ ತರದೆ ಶಿಲ್ಪಾ ನಾಗ್ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿರುದ್ಧ ಮಾಡಿದ್ದ ಸರಣಿ ಆರೋಪಗಳಿಗೆ ಆಕ್ಷೇಪಿಸಿದರು.

2019ರ ಫೆಬ್ರವರಿ 14ಕ್ಕೆ ಮೈಸೂರು ಮಹಾನಗರ ಪಾಲಿಕೆಗೆ ಆಯುಕ್ತೆಯಾಗಿ ಶಿಲ್ಪಾ ನಾಗ್ ಬಂದಿದ್ದಾರೆ, ಇಷ್ಟು ದಿನ ಇಲ್ಲದ ಸಮಸ್ಯೆ, ಆರೋಪ ಈಗ ಒಂದು ಏಕೆ ಎಂದು ರೋಹಿಣಿ ಸಿಂಧೂರಿ ಪ್ರಶ್ನಿಸಿದರು.

ರೋಹಿಣಿ ಸಿಂಧೂರಿ ಸ್ಪಷ್ಟನೆಯೇನು?: ಸರಿಯಾದ ಅಂಕಿ ಅಂಶ ನೀಡಿ ಎಂದಷ್ಟೇ ನಾನು ಕೇಳಿದ್ದೆ, ವಾರ್ಡ್ ವೈಸ್ ಅಂಕಿ ಅಂಶಗಳು ಎಷ್ಟಿದೆ ಎಂದು ಕೇಳಿದ್ದೆ, ಸಿಎಸ್ ಆರ್ ಫಂಡ್ ಜಿಲ್ಲಾಧಿಕಾರಿ ನಿಯಂತ್ರಣದಲ್ಲಿದೆ, ಯಾವುದಕ್ಕೆ, ಯಾವ ವಾರ್ಡ್ ಗೆ ಎಷ್ಟು ಖರ್ಚು ಮಾಡಿದ್ದೀರಿ, ಎಲ್ಲ 12 ಕೋಟಿ ಖರ್ಚು ಮಾಡಿದ್ದೀರಾ ಎಂದು ಕಾರ್ಪೊರೇಷನ್ ನಲ್ಲಿ ಕೇಳಿದ್ದು ನಿಜ, ಹಳ್ಳಿ ಕಡೆ ವೈದ್ಯರ ನಡೆ ಕಾರ್ಯಕ್ರಮಕ್ಕೂ ನಾವು ಹಣ ನೀಡಬೇಕಾಗಿದೆ. ಈ ಬಗ್ಗೆ ನಾನು ವಿವರಣೆ ಕೇಳಿದ್ದು ತಪ್ಪೇ ಎಂದು ಸಿಂಧೂರಿ ಕೇಳಿದರು.

ಇನ್ನು ಇಂದು ಶಿಲ್ಪಾ ನಾಗ್ ಅವರ ಪರವಾಗಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಪಾಲಿಕೆ ಕಾರ್ಮಿಕರು ಇಂದು ತಮ್ಮ ಕೆಲಸಕ್ಕೆ ಬಹಿಷ್ಕಾರ ಹಾಕಿ ಶಿಲ್ಪಾ ನಾಗ್ ಅವರಿಗೆ ನ್ಯಾಯ ಕೊಡಿಸಬೇಕು, ರೋಹಿಣಿ ಸಿಂಧೂರಿಯವರನ್ನು ಬೇರೆ ಕಡೆಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು. 

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಗಮನ ನಿರೀಕ್ಷೆ: ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೈಸೂರಿಗೆ ಆಗಮಿಸುತ್ತಿದ್ದು ಇಬ್ಬರು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಇನ್ನೆರಡು ದಿನಗಳೊಳಗೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com