ಶಿಲ್ಪಾ ನಾಗ್ ಅವರ ರಾಜೀನಾಮೆ ಸ್ವೀಕರಿಸುವುದಿಲ್ಲ, ಅವರ ಸೇವೆ ಮೈಸೂರಿಗೆ ಬೇಕು: ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್

ಯಾವುದೇ ಕಾರಣಕ್ಕೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ, ಅವರ ಸೇವೆ ಮೈಸೂರು ನಗರಕ್ಕೆ ಅತ್ಯಗತ್ಯವಾಗಿದೆ, ಅವರ ಮನವೊಲಿಸುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಎಸ್ ಟಿ ಸೋಮಶೇಖರ್, ಶಿಲ್ಪಾ ನಾಗ್
ಎಸ್ ಟಿ ಸೋಮಶೇಖರ್, ಶಿಲ್ಪಾ ನಾಗ್

ಬೆಂಗಳೂರು: ಯಾವುದೇ ಕಾರಣಕ್ಕೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ, ಅವರ ಸೇವೆ ಮೈಸೂರು ನಗರಕ್ಕೆ ಅತ್ಯಗತ್ಯವಾಗಿದೆ, ಅವರು ಸಮರ್ಥ ಅಧಿಕಾರಿ, ಅವರ ಮನವೊಲಿಸಿ ರಾಜೀನಾಮೆ ವಾಪಸ್ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೊರೋನಾ ಸೋಂಕಿನ ಸಮಯದಲ್ಲಿ ಮೈಸೂರಿನಲ್ಲಿ ಈ ರೀತಿ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಬಾರದಾಗಿತ್ತು. ಆಗಿ ಹೋಗಿದೆ, ಅದನ್ನು ಸರಿಮಾಡಲು ಪ್ರಯತ್ನಿಸುತ್ತೇನೆ ಎಂದರು.

ಇಂದು ಮೈಸೂರಿಗೆ ಹೋಗುತ್ತೇನೆ, ಇಬ್ಬರೂ ಅಧಿಕಾರಿಗಳ ಬಳಿ ಮಾತನಾಡಿ ಸಮಸ್ಯೆಯೇನೆಂದು ಕೇಳುತ್ತೇನೆ, ಶಿಲ್ಪಾ ನಾಗ್ ಅವರಲ್ಲಿ ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇನೆ, ಇಂದು ಕೂಡ ಮನವೊಲಿಸುತ್ತೇನೆ, ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ಸಹ ತಂದಿದ್ದೇವೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಲ್ಲಿ ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಬಾರದು ಎಂದು ಹೇಳಿದ್ದೇನೆ, ಒಬ್ಬ ಐಎಎಸ್ ಹೆಣ್ಣುಮಗಳು ಏಕಾಏಕಿ ಈ ನಿರ್ಧಾರಕ್ಕೆ ಬರಬಾರದು ಎಂದರು.

ಎಲ್ಲಾ ಜಿಲ್ಲೆಗಳಂತೆ ಮೈಸೂರಿನಲ್ಲಿ ಕೂಡ ಕೋವಿಡ್ ನಿರ್ವಹಣೆಯ ಕೆಲಸದಲ್ಲಿ ಸಾಕಷ್ಟು ಸವಾಲುಗಳಿವೆ, ಜಿಲ್ಲೆಯಲ್ಲಿ ನಾವು ಅಧಿಕಾರಿಗಳು ಸಾಧ್ಯವಾದಷ್ಟು ಕೆಲಸ ಮಾಡುತ್ತಿದ್ದೇವೆ, ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಪಕ್ಷ ಬೇಧ ಮರೆತು ಕೆಲಸ ಮಾಡಬೇಕಿದೆ. ಈ ಬೆಳವಣಿಗೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದಷ್ಟೇ ಸಚಿವ ಸೋಮಶೇಖರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com