
ಶಿವಮೊಗ್ಗ: ಕೋವಿಡ್ ನಿರ್ವಹಣೆ ಬಗ್ಗೆ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಬಹಳ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ, ಈ ಬಗ್ಗೆ ಯಾವ ಗೊಂದಲ ಕೂಡ ಇಲ್ಲ, ಮೈಸೂರಿನ ಜಿಲ್ಲಾಧಿಕಾರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಮಧ್ಯೆ ಭಿನ್ನಾಭಿಪ್ರಾಯ-ಗೊಂದಲವುಂಟಾಗಿದ್ದು, ಬಹಿರಂಗವಾಗಿ ಈ ಬೆಳವಣಿಗೆಯಾಗಿರುವುದು ನಿಜಕ್ಕೂ ಒಳ್ಳೆಯದಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಅವರು, ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಮಾಡಲಾಗುತ್ತದೆ, ಅಲ್ಲಿ ಬಗೆಹರಿಯದಿದ್ದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದರು.
ಅಧಿಕಾರಿಗಳು ಈ ರೀತಿ ಬಹಿರಂಗವಾಗಿ ಭಿನ್ನಾಭಿಪ್ರಾಯ ತೋರಿಸುವುದು ಒಳ್ಳೆಯದಲ್ಲ. ರೋಹಿಣಿ ಸಿಂಧೂರಿಯವರು ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿಲ್ಲ, ಹೀಗಾಗಿ ನನಗೆ ಅವರ ಕಾರ್ಯವೈಖರಿ ಬಗ್ಗೆ ಗೊತ್ತಿಲ್ಲ, ಶಿಲ್ಪಾ ನಾಗ್ ಅವರು ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ, ಕೇರಳ ಗ್ರಾಮ ಪಂಚಾಯತ್ ಕೆಲಸಗಳ ಬಗ್ಗೆ ನಾವು ಅಧ್ಯಯನ ಮಾಡಿ ಬಂದಿದ್ದೆವು. ಅವರ ಕೆಲಸದ ಶೈಲಿ ಬಗ್ಗೆ ಗೊತ್ತಿದೆ, ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಶಿಲ್ಪಾ ನಾಗ್ ಉತ್ತಮ ಕೆಲಸ ಮಾಡಿದ್ದರು.
ಈ ಘಟನೆ ಹೇಗೆ ನಡೆಯಿತು, ಯಾಕೆ ನಡೆಯಿತು, ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸುವಷ್ಟರ ಮಟ್ಟಿಗೆ ಏನಾಯಿತು ಎಂದು ಗೊತ್ತಿಲ್ಲ, ಮುಖ್ಯ ಕಾರ್ಯದರ್ಶಿಗಳು ನಿನ್ನೆ ಹೋಗಿ ಮಾಹಿತಿ ಪಡೆದುಕೊಂಡು ಮಾಡಿದ್ದಾರೆ, ಅವರು ಮುಖ್ಯಮಂತ್ರಿಗಳಿಗೆ ವರದಿ ನೀಡಿದ ನಂತರ ಏನು ಕ್ರಮ ಕೈಗೊಳ್ಳುತ್ತಾರೆ ನೋಡಬೇಕು ಎಂದರು.
Advertisement