ಮಾಜಿ ಸಚಿವ, ಪ್ರೊ. ಮಮ್ತಾಜ್ ಅಲಿ ಖಾನ್ ಇನ್ನಿಲ್ಲ

ಮಾಜಿ ಸಚಿವ, ನಿವೃತ್ತ ಪ್ರೊಫೆಸರ್ ಮಮ್ತಾಜ್ ಅಲಿ ಖಾನ್ (94) ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.
ಮಮ್ತಾಜ್ ಅಲಿ ಕಾನ್
ಮಮ್ತಾಜ್ ಅಲಿ ಕಾನ್

ಬೆಂಗಳೂರು: ಮಾಜಿ ಸಚಿವ, ನಿವೃತ್ತ ಪ್ರೊಫೆಸರ್ ಮಮ್ತಾಜ್ ಅಲಿ ಖಾನ್ (94) ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.

ಬೆಂಗಳೂರಿನ ಗಂಗಾನಗರ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಖಾನ್ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

2008ರಲ್ಲಿ ಬಿ,ಎಸ್, ಯಡಿಯೂರಪ್ಪ ಅವರ ಸಂಪುಟದಲ್ಲಿ ಅಲ್ಪಸಖ್ಯಾತ ಕಲ್ಯಾಣ, ಹಜ್ ವಕ್ತ್ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಖಾನ್ ಬೆಂಗಳೂರು ಕೃಷಿ ವಿವಿನಲಿ ಸಮಾಜಶಾಸ್ತ್ರ ಪ್ರೊಫೆಸರ್ ಆಗಿ ಸಹ ಕೆಲಸ ಮಾಡಿದ್ದಾರೆ.

ಮೃತ ಪುತ್ರನ ಹೆಸರಲ್ಲಿ ಆರ್.ಟಿ. ನಗರದಲ್ಲಿ ಮೂರು ದಶಕಗಳ ಕಾಲ ಶಾಲೆ ನಡೆಸುತ್ತಿದ್ದ ಖಾನ್ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ ಸಹಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸುತ್ತಿದ್ದರು.

ಮೃತರ ಅಂತ್ಯಕ್ರಿಕೆ ಇಂದು ಮಧ್ಯಾಹ್ನ ನಗರದ ಅರಮನೆ ರಸ್ತೆಯಲ್ಲಿನ ಖುದ್ದೂಸ್ ಸಾಹೇಬ್ ಖಬರ್ ಸ್ಥಾನ್ ನಲ್ಲಿ ನೆರವೇರಲಿದೆ ಎಂದು ಮೂಲಗಳು ಹೇಳಿದೆ.

ಖಾನ್ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

"ರಾಜ್ಯದ ಮಾಜಿ ಸಚಿವರಾಗಿದ್ದ ಡಾ. ಮುಮ್ತಾಜ್ ಅಲಿ ಖಾನ್ ಸಾಹೇಬ್ ಅವರು ನಿಧನರಾಗಿರುವ ವಿಚಾರ ತಿಳಿದು ಬೇಸರವಾಯಿತು.  ಅವರ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಮುಖ್ಯಮಂತ್ರಿ ಸಂತಾಪ

ಮಾಜಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ, ಹಜ್ , ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಅವರು, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.

ಅವರ ನಿಧನದಿಂದ ಆತ್ಮೀಯ ಸ್ನೇಹಿತ ಹಾಗೂ ಸರಳ ಹಾಗೂ ಸಜ್ಜನ ಚಿಂತನಾಶೀಲ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಯವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com