ಹೊನ್ನಾಳಿ; ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಕೊರೋನಾ ಎರಡನೇ ಅಲೆ ಬಂದ ಮೇಲೆ ತಮ್ಮ ಕ್ಷೇತ್ರದಲ್ಲಿ ಟೊಂಕಕಟ್ಟಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ತುಂಬೆಲ್ಲಾ ಓಡಾಡುತ್ತಾ ಜನರಿಗೆ ಧೈರ್ಯ ತುಂಬುವುದಲ್ಲದೆ ಆಹಾರ, ವೈದ್ಯಕೀಯ ನೆರವು, ಕೊರೋನಾ ಸೋಂಕುತರು ನೆಲೆಸಿರುವ ಕೇಂದ್ರಗಳಲ್ಲಿ ವಾಸ ಮಾಡಿ ಯೋಗ, ಧ್ಯಾನ ಶಿಬಿರ, ಸಂಗೀತ ರಸಸಂಜೆಗಳನ್ನು ನಡೆಸಿಕೊಡುತ್ತಿದ್ದಾರೆ.
ಕೋವಿಡ್ ಸೋಂಕಿತರ ಮಧ್ಯೆ ಅವರು ಓಡಾಡುವಾಗ, ಕೆಲಸ ಮಾಡುವಾಗ ಸಹಜವಾಗಿ ಭಯವಾಗುತ್ತದೆ, ಆದರೆ ಈ ಸಂದರ್ಭದಲ್ಲಿ ಜನಸೇವೆ ಮಾಡುವುದು ಅಗತ್ಯ ಎಂದು ಕಂಡು ಅವರೊಂದಿಗೆ ನಾನು ಕೂಡ ಕೈಜೋಡಿಸಿದ್ದೇನೆ ಎಂದು ರೇಣುಕಾಚಾರ್ಯ ಪತ್ನಿ ಸುಮಿತ್ರಾ ಹೇಳುತ್ತಾರೆ.
ಒಂದು ವಾರದಿಂದ ನಾನು ಕೂಡ ಪತಿಯ ಜೊತೆ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಇದ್ದೇವೆ, ನಮ್ಮ ಮನೆಯಿಂದಲೂ ಆಸ್ಪತ್ರೆಗೆ, ಕೋವಿಡ್ ಕೇರ್ ಸೆಂಟರ್ ಗೆ ಊಟ ಹೋಗುತ್ತದೆ. ಜನರಿಗೆ ಅನೇಕ ಸಮಸ್ಯೆಗಳಿರುತ್ತವೆ.ಹೀಗಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದೇವೆ ಎಂದರು.
ಎಲ್ಲಾ ಕಡೆಯಿಂದಲೂ ನನ್ನ ಪತಿ ರೇಣುಕಾಚಾರ್ಯ ಅವರ ಕೆಲಸಕ್ಕೆ ಮೆಚ್ಚುಗೆಯ ಮಾತುಗಳು ಬರುತ್ತಿವೆ, ಇದರಿಂದ ಇನ್ನೂ ಹೆಚ್ಚು ಕೆಲಸ ಮಾಡುವ ಸ್ಪೂರ್ತಿ ಬರುತ್ತದೆ. ವಿಶ್ರಾಂತಿಯಿಲ್ಲದೆ ನನ್ನ ಪತಿ ಹಗಲಿರುಳು ದುಡಿಯುತ್ತಿದ್ದಾರೆ, ರೇಣುಕಾಚಾರ್ಯ ಅವರು ನನಗೆ ಪತಿಯಾಗಿ ಸಿಕ್ಕಿರುವುದು ನನ್ನ ಏಳೇಳು ಜನ್ಮದ ಪುಣ್ಯ, ಕಳೆದ ಆರು ಜನ್ಮಗಳಲ್ಲಿ ನಾನು ಎಷ್ಟು ಪುಣ್ಯ ಮಾಡಿರಬೇಕು ಎಂದು ನನಗೆ ಖುಷಿಯಾಗುತ್ತಿದೆ ಎಂದು ಹೆಮ್ಮೆಯಿಂದ ಸುಮಿತ್ರಾ ಹೇಳಿಕೊಂಡರು.
Advertisement