ಮೈಸೂರು: ತನ್ನ 2 ವರ್ಷದ ಮಗು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಆ್ಯಂಬುಲೆನ್ಸ್ ಚಾಲಕರೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಆ್ಯಂಬಲೆನ್ಸ್ ಚಾಲಕ ಸೈಯ್ಯದ್ ಮುಬಾರಕ್ ಎಂಬುವರ 2 ವರ್ಷದ ಮಗು ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡು ಗಂಭೀರವಾಗಿ ಮಗು ಗಾಯಗೊಂಡರೂ, ರೋಗಿಯೊಬ್ಬರನ್ನು ಆಂಬುಲೆನ್ಸ್‌ನಲ್ಲಿ ಶಿಫ್ಟ್ ಮಾಡಿದ್ದಾರೆ
ಗೌಸಿಯಾನಗರದ ನಿವಾಸಿಯಾದ ಮುಬಾರಕ್ ಮೊದಲಿಗೆ ಟೆಂಪೊ ಟ್ರಾವಲರ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಲಾಕ್‌ಡೌನ್ ನಂತರ ಇವರು ಬಿಜೆಪಿ ವತಿಯಿಂದ ನೀಡಲಾದ ಉಚಿತ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸತೊಡಗಿದರು. ಈ ವೇಳೆ ಜೂನ್ 11ರಂದು ಇವರ ಮಗು ಸೈಯದ್ ಇಬ್ರಾಹಿಂ (2) ಆಟವಾಡುತ್ತಿರುವಾಗ ಸ್ನಾನಕ್ಕಾಗಿ ಬಕೆಟ್‌ಗೆ ತೆಗೆದಿರಿಸಿದ್ದ ಬಿಸಿ ನೀರನ್ನು ತನ್ನ ಮೇಲೆ ಚೆಲ್ಲಿಕೊಂಡು ಗಂಭೀರವಾಗಿ ಗಾಯಗೊಂಡಿತು. ಕೂಡಲೇ ಮಗುವನ್ನು ಇವರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರು.
ಜೀವನ್ಮರಣದ ನಡುವೆ ಮಗು ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಕರೆ ಬಂದ ತಕ್ಷಣ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರನ್ನು ಚಾಮರಾಜನಗರಕ್ಕೆ ತನ್ನ ಆಂಬುಲೆನ್ಸ್‌ನಲ್ಲಿ ಸೋಮವಾರ ರಾತ್ರಿ ಕರೆದುಕೊಂಡು ಹೋಗುವ ಮೂಲಕ ಮುಬಾರಕ್ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇವರು ನಸುಕಿನ ಹೊತ್ತಿಗೆ ವಾಪಸ್ ಬರುವಷ್ಟರಲ್ಲಿ ಇವರ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತ್ತು.
ಕಳೆದ ಒಂದೂವರೆ ತಿಂಗಳಲ್ಲಿ 100 ಕ್ಕೂ ಹೆಚ್ಚು ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ, ಕಳೆದ ಮೂರು ದಿನಗಳಲ್ಲಿ ತಮ್ಮ ಮಗ ಆಸ್ಪತ್ರೆಯಲ್ಲಿದ್ದರೂ ಮುಬಾರಕ್ ಕರೆದ ಕೂಡಲೇ ಮನೆ ಬಾಗಿಲಿಗೆ ತೆರಳಿ ತಮ್ಮ ಕರ್ತವ್ಯ ನಿಷ್ಠೆ ತೋರುತ್ತಿದ್ದಾರೆ.
ಬಿಸಿ ನೀರಿಗೆ ಬಿದ್ದು ನನ್ನ ಮಗನ ಮೈಯ್ಯೆಲ್ಲೆಲ್ಲಾ ಸುಟ್ಟಗಾಯಗಳಾಗಿದ್ದವು, ವೈದ್ಯರು ತಮ್ಮ ಕೈಯ್ಯಲ್ಲಾದ ಪ್ರಯತ್ನ ಮಾಡುವುದಾಗಿ ತಿಳಿಸಿದರು, ಆ ವೇಳೆ ನಾನು ಯೋಚಿಸಿದೆ, ನನ್ನ ಹಾಗೆ ಕೂಡ ಬೇರೆ ರೋಗಿಗಳು ಕಷ್ಟದಲ್ಲಿರುತ್ತಾರೆ ಎಂದು ತಿಳಿದು ಎಲ್ಲವನ್ನು ವೈದ್ಯರು ಮತ್ತು ದೇವರಿಗೆ ಬಿಟ್ಟು ನನ್ನ ಕರ್ತವ್ಯಕ್ಕೆ ತೆರಳಲು ನಿರ್ಧರಿಸಿದೆ. ನಗರದಿಂದ ನಂಜನಗೂಡಿಗೆ ಹಲವು ರೋಗಿಗಳನ್ನು ಶಿಫ್ಟ್ ಮಾಡಿದೆ ಎಂದು ಮುಬಾರಕ್ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಮೈಸೂರಿನಿಂದ ಚಾಮರಾಜನಗರಕ್ಕೆ ರೋಗಿಯೊಬ್ಬರನ್ನು ಶಿಫ್ಟ್ ಮಾಡಿದೆ.ಆದರೆ ಮಂಗಳವಾರ ನನ್ನ ಮಗ ಚಿಕಿತ್ಸೆಗೆ ಸ್ಪಂದಿಸುವದನ್ನು ನಿಲ್ಲಿಸಿದ, ನನ್ನ ಮಗನಿಗಾಗಿ ನಾನು ಹಲವು ಪ್ಲಾನ್ ಮಾಡಿದ್ದೆ,. ಆದೆ ಅವನು ನಮ್ಮನ್ನು ಬಿಟ್ಟು ಹೋದ, ಆದರೆ ಇದುವರೆಗೂ ನಾನು ಈ ವಿಷಯವನ್ನು ನನ್ನ ಪತ್ನಿಗೆ ತಿಳಿಸಲಿಲ್ಲ ಎಂದು ಮುಬಾರಕ್ ತಿಳಿಸಿದರು.
ತನ್ನ ಮಗ ಸಾವಿನ ಜೊತೆ ಹೋರಾಟ ನಡೆಸುತ್ತಿದ್ದರೂ ಮುಬಾರಕ್ ಜನರ ಸೇವೆ ಮುಂದುವರಿಸಿದ್ದರು, ಕಳೆದ ಒಂದೂವರೆ ತಿಂಗಳಿಂದ ಅವರು ಹಲವು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತನ್ನ ಮಗನ ಸ್ಥಿತಿ ಚಿಂತಾಜನಕವಾಗಿದ್ದರೂ ಸಮಾಜ ಸೇವೆ ಬಿಡಲಿಲ್ಲ, ಅವರನ್ನು ನಾವು ಮೆಚ್ಚದೇ ಇರಲು ಸಾಧ್ಯವೇ ಇಲ್ಲ ಎಂದು ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀವತ್ಸ ಹೇಳಿದ್ದಾರೆ
Advertisement