ಎಸ್ಐಟಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮುಚ್ಚಬಾರದು: ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಮನವಿ!

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.
ಇಂದಿರಾ ಜೈಸಿಂಗ್
ಇಂದಿರಾ ಜೈಸಿಂಗ್

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.

ಈ ವೇಳೆ ತನ್ನನ್ನೂ ಪ್ರಕರಣದಲ್ಲಿ ವಾದಿಯಾಗಿಸಬೇಕು ಎಂದು ಕೋರಿ ಹೈಕೋರ್ಟ್​ಗೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಯುವತಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಯುವತಿ ಪರ ನ್ಯಾಯಾಲಯಕ್ಕೆ ಹಾಜರಾದ ಸುಪ್ರೀಂಕೋರ್ಟ್​ ವಕೀಲ ಇಂದಿರಾ ಜೈಸಿಂಗ್​ ವಾದ ಮಂಡಿಸಿದರು.

ಏಕ ಸದಸ್ಯ ಪೀಠದ ಮುಂದೆ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕು’ ಎಂದು ಅರ್ಜಿದಾರರ ಪರ ವಕೀಲರಾದ ಇಂದಿರಾ ಜೈಸಿಂಗ್‌ ಕೋರಿದರು. ವಿಶೇಷ ತನಿಖಾ ತಂಡ(ಎಸ್‌ಐಟಿ) ಸ್ವತಂತ್ರವಾಗಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಸಂತ್ರಸ್ತೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. 

ಎಸ್ಐಟಿ ತನಿಖೆ ಪ್ರಶ್ನಿಸಿ ಯುವತಿ ರಿಟ್ ಸಲ್ಲಿಸಿದ್ದಾಳೆ. ಆ ಅರ್ಜಿಯನ್ನೂ ಪಿಐಎಲ್​​ನೊಂದಿಗೆ ವಿಚಾರಣೆ ನಡೆಸಿ ಎಂದು ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಮನವಿ ಮಾಡಿದರು. ಹೈಕೋರ್ಟ್ ಉಸ್ತುವಾರಿಯಲ್ಲಿದ್ದಾಗ ತನಿಖೆ ಮುಗಿಸಬಾರದು ಎಂದು ಯುವತಿ ಪರ ವಕೀಲರು ಹೈಕೋರ್ಟ್​​ಗೆ ಮನವಿ ಮಾಡಿದರು.

ತನಿಖೆ ಮುಕ್ತಾಯಗೊಂಡಿಲ್ಲ. ತನಿಖೆಯ ಪ್ರಗತಿ ವರದಿಯನ್ನಷ್ಟೇ ಸಲ್ಲಿಸಲಾಗಿದೆ. ತನಿಖೆಯು ಇನ್ನೂ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರತಿಕ್ರಿಯಿಸಿದರು. ಹೈಕೋರ್ಟ್​ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಪರ ವಕೀಲರು ಲಿಖಿತ ಆಕ್ಷೇಪ ಸಲ್ಲಿಸಿದರು.  ಈ ನಡುವೆ ಜಂಟಿ ಪೊಲೀಸ್ ಆಯುಕ್ತರು ಮುಚ್ಚಿದ ಲಕೋಟೆಯಲ್ಲಿ ತನಿಖೆಯ ಪ್ರಗತಿ ವರದಿ ಸಲ್ಲಿಸಿದರು. ತನಿಖೆ ಇನ್ನೂ  ಮುಂದುವರಿದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಎಸ್​​ಐಟಿ ಮುಖ್ಯಸ್ಥರ ಸಮ್ಮತಿ ಮೇರೆಗೆ ತನಿಖಾ ಪ್ರಗತಿ ವರದಿಗೆ ಸಹಿಹಾಕಿದ್ದೇನೆ ಎಂದೂ ಜಂಟಿ ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಪ್ರಕರಣದ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದ ನ್ಯಾಯಾಲಯವು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಡಲು ಸೂಚಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com